ರಾಜು ಕನ್ನಡ ಮೀಡಿಯಂ. ಇದು ರಾಜ್ಯೋತ್ಸವದ ಸಂದರ್ಭಕ್ಕೆ, ಸಂಭ್ರಮಕ್ಕೆ, ಸಂಕಟಕ್ಕೆ ಹೇಳಿ ಮಾಡಿಸಿದಂತಾ ಚಿತ್ರ ಎಂದರೆ ತಪ್ಪಾಗಲ್ಲ. ಚಿತ್ರದ ಕಥೆ ಇರುವುದೇ ಕನ್ನಡ ಮೀಡಿಯಂ ಹುಡುಗ, ಇಂಗ್ಲಿಷ್ ಬರದೇ ಅನುಭವಿಸುವ ಸಂಕಟಗಳಲ್ಲಿ. ಪ್ರತಿಭೆಯೆಂದರೆ, ಇಂಗ್ಲಿಷ್ ಗೊತ್ತಿರುವುದಷ್ಟೇ ಅಲ್ಲ ಎಂದು ಸಾರುವ ಸಿನಿಮಾ ರಾಜು ಕನ್ನಡ ಮೀಡಿಯಂ.
ಈ ಮಾತನ್ನು ಹೇಳುವುದು ನಾಯಕ ಒಬ್ಬನೇ ಅಲ್ಲ. ನಾಯಕನ ಜೊತೆ ಕಿಚ್ಚ ಸುದೀಪ್ ಇದ್ದಾರೆ. ಸ್ಟಾರ್ ನಟನ ಜೊತೆ ಕಿರಿಕ್ ಕೀರ್ತಿ, ಓಂಪ್ರಕಾಶ್ ರಾವ್, ಬಿಗ್‍ಬಾಸ್ ಪ್ರಥಮ್, ರೇಡಿಯೋ ಜಾಕಿ ರ್ಯಾಪಿಡ್ ರಶ್ಮಿ, ಇಂದ್ರಜಿತ್ ಲಂಕೇಶ್.. ಹೀಗೆ ತಾರೆಯರ ದಂಡೇ ಇದೆ. ಇವರೆಲ್ಲರೂ ಚಿತ್ರದಲ್ಲಿ ಕನ್ನಡದ ಬಗ್ಗೆಯೇ ಮಾತನಾಡುತ್ತಾರೆ. ಇಂಗ್ಲಿಷ್ ಗೊತ್ತಿಲ್ಲ ಎನ್ನುವುದು ದೊಡ್ಡ ಸಮಸ್ಯೆ ಅಲ್ಲವೇ ಅಲ್ಲ ಎನ್ನುತ್ತಾರಂತೆ. ಹೇಗೆ ಎಂದರೆ, ನಿರ್ದೇಶಕ ನರೇಶ್ ಗುಟ್ಟು ಬಿಟ್ಟುಕೊಡಲ್ಲ. ಚಿತ್ರಮಂದಿರದಲ್ಲೇ ನೋಡಿ ಎನ್ನುತ್ತಾರೆ.
ಒಂದರ ಹಿಂದೊಂದರಂತೆ ಹಿಟ್ ಚಿತ್ರಗಳನ್ನೇ ಕೊಟ್ಟ ನಿರ್ಮಾಪಕ ಸುರೇಶ್, ರಾಜು ಕನ್ನಡ ಮೀಡಿಯಂ ಮೂಲಕ ಒಂದು ಸೂಪರ್ ಹಿಟ್ ಚಿತ್ರದ ನಿರೀಕ್ಷೆಯಲ್ಲಿದ್ದಾರೆ.