` 6 ದಶಕಗಳ ಹಾಡು ಕೋಗಿಲೆ ಹಾಡು ನಿಲ್ಲಿಸಿದಾಗ.. - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
s janaki signing career ends
S Janaki Image

ಎಸ್.ಜಾನಕಿ 6 ದಶಕಗಳ ತಮ್ಮ ವೃತ್ತಿಪರ ಗಾಯನ ಬದುಕಿಗೆ ವಿದಾಯ ಹೇಳಿದ್ದಾರೆ. ಇನ್ನು ಮುಂದೆ ಅವರು ಹಾಡುವುದಿಲ್ಲ. ಮೈಸೂರಿನ ಮಾನಸ ಗಂಗೋತ್ರಿ ರಂಗಮಂದಿರದಲ್ಲಿ ತಮ್ಮ ಕಂಠಸಿರಿಯಲ್ಲಿ ಹಲವು ಕನ್ನಡ ಗೀತೆಗಳನ್ನು ಹಾಡಿದ ಜಾನಕಿ, ವೃತ್ತಿ ಬದುಕಿಗೆ ವಿದಾಯ ಘೋಷಿಸಿದರು. ಕಿಕ್ಕಿರಿದು ಸೇರಿದ್ದ ಸಾವಿರಾರು ಅಭಿಮಾನಿಗಳು ಭಾವಪರವಶರಾಗಿಯೇ ಜಾನಕಿಯವರ ಕೊನೆಯ ಹಾಡುಗಳಿಗೆ ಸಾಕ್ಷಿಯಾದರು. ಸಂಭ್ರಮಿಸಿದರು.

ಪೂಜಿಸಲೆಂದೆ.. ಹೂಗಳ ತಂದೆ.., ಇಂದು ಎನಗೆ ಗೋವಿಂದ.., ಆಸೆಯ ಭಾವ ಒಲವಿನ ಜೀವ.., ಕಂಗಳು ವಂದನೆ ಹೇಳಿವೆ.., ನೀ ಯಾರೋ ಏನೋ ಸಖಾ.., ಹೀಗೆ ಜಾನಕಿ ಒಂದೊಂದು ಹಾಡು ಹಾಡಿದಾಗಲೂ ಕರತಾಡನ ಮುಗಿಲುಮುಟ್ಟುತ್ತಿತ್ತು. ಶಿಳ್ಳೆ, ಚಪ್ಪಾಳೆಗಳು ರಂಗಮಂದಿರದಲ್ಲಿ ಮಾರ್ದನಿಸುತ್ತಿದ್ದವು. ಹಾಗೆ ಸಾವಿರಾರು ಅಭಿಮಾನಿಗಳ ಸಮ್ಮುಖದಲ್ಲಿ ಹಾಡುವ ಕೋಗಿಲೆ ಹಾಡು ನಿಲ್ಲಿಸಿತು.

ರಾಜಮಾತೆ ಪ್ರಮೋದಾದೇವಿ ಒಡೆಯರ್ ನೆನಪಿನ ಕಾಣಿಕೆ ನೀಡಿ ಗೌರವಿಸಿದರು. ಭಾರತಿ ವಿಷ್ಣುವರ್ಧನ್, ಹೇಮಾಚೌಧರಿ, ಜಯಂತಿ, ಅನಿರುದ್ಧ, ಶಿವರಾಂ, ಕಾರ್ಯಕ್ರಮ ಆಯೋಜಿಸಿದ್ದ ಪವನ್, ಪ್ರವೀಣ್, ನವೀನ್ ಮೊದಲಾದವರು ಜಾನಕಿಯವರ ಕೊನೆಯ ಕಾರ್ಯಕ್ರಮಕ್ಕೆ ಸಾಕ್ಷಿಯಾದರು.

1957ರಲ್ಲಿ ತಮಿಳಿನಲ್ಲಿ ಮೊದಲ ಹಾಡು ಹಾಡಿದ್ದ ಜಾನಕಿ, ಸುಮಾರು 50 ಸಾವಿರ ಗೀತೆಗಳಿಗೆ ಧ್ವನಿಯಾಗಿದ್ದಾರೆ. ಕನ್ನಡಿಗರ ವಿಶೇಷ ಪ್ರೀತಿ ಸಂಪಾದಿಸಿದ್ದ ಜಾನಕಿ, ತಮ್ಮ ವೃತ್ತಿ ಜೀವನವನ್ನು ಕನ್ನಡದ ಹಾಡುಗಳ ಮೂಲಕವೇ ಮುಗಿಸಿದ್ದು ಕನ್ನಡಿಗರ ಪಾಲಿಗೆ ಹೆಮ್ಮೆ. ಜಾನಕಿಯವರ ಮುಂದಿನ ಜೀವನ ಸುಖಕರವಾಗಿರಲಿ.

Amitab Bachchan Helps Film Workers On Labours Day

Food Kits Distribution To Media Personnel By Ministers Bc Patil Gallery