` ಬರೆದವರನ್ನು ಕಾಡಿದ ಶಕೀಲ ಕಥೆಗಳು - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
shakeel's biography
Shakeela Image

ಶಕೀಲ. ಒಂದಾನೊಂದು ಕಾಲದಲ್ಲಿ ಯುವಕರ ನಿದ್ದೆಗೆಡಿಸಿದ್ದ ನಟಿ. ಆದರೆ, ಆಕೆಯ ಬದುಕು ಅಷ್ಟು ರೋಮಾಂಚಕವಲ್ಲ. ಕಣ್ಣೀರ ಧಾರೆ. ಆಕೆಯ ಜೀವನ ಚರಿತ್ರೆ ಮಲಯಾಳಂನಲ್ಲಿ ಬಂದಿತ್ತು. ಅದನ್ನು ಕನ್ನಡಕ್ಕೆ ಅನುವಾದಿಸಿದ್ದವರು ಕೆ.ಕೆ. ಗಂಗಾಧರನ್. ಪುಸ್ತಕ ಬರೆದು ಎಷ್ಟೋ ವರ್ಷಗಳಾಗಿವೆ. ಆದರೆ, ಇವತ್ತಿಗೂ ಅವರನ್ನು ಆ ಪುಸ್ತಕ ಕಾಡುತ್ತಲೇ ಇದೆ. ಅವರೇ ಹೇಳಿಕೊಂಡಿರುವ ಕಥೆಗಳನ್ನೊಮ್ಮೆ ಓದಿ.

ಶಕೀಲ ಕೃತಿಯನ್ನು ಮಲಯಾಳಂನಲ್ಲಿ ಬರೆದಿದ್ದವರು ಮಲಯಾಳಂನ ಖ್ಯಾತ ಲೇಖಕ. ಕೇಂದ್ರ ಸಾಹಿತ್ಯ ಅಕಾಡೆಮಿ ಪುರಸ್ಕøತ. ಆದರೆ, ಶಕೀಲ ಪುಸ್ತಕ ಬರೆದೆನೆಂದು ಗೊತ್ತಾದರೆ, ತನ್ನ ಇಮೇಜ್ ಹಾಳಾಗುತ್ತೆ ಎಂಬ ಕಾರಣಕ್ಕೆ, ಆತ ಕೃತಿಯಲ್ಲಿ ತನ್ನ ಹೆಸರನ್ನೇ ಹಾಕಿಕೊಂಡಿರಲಿಲ್ಲ.

ಪುಸ್ತಕ ಓದಿದ ಶಿವಮೊಗ್ಗದ ವೈದ್ಯರೊಬ್ಬರು ಶಕೀಲಾರನ್ನು ತನಗೆ ಮದುವೆ ಮಾಡಿಸುವಂತೆ ಗಂಗಾಧರನ್‍ಗೆ ದುಂಬಾಲು ಬಿದ್ದಿದ್ದರು. ನೀವೇ ನಿಂತು ಮದುವೆ ಮಾಡಿಸಬೇಕು ಎಂದು ಗೋಗರೆದಿದ್ದರು. ಕೊನೆಗೆ ನಾನು ಬ್ರೋಕರ್ ಅಲ್ಲ, ಅನುವಾದಕನಷ್ಟೇ ಎಂದು ಜಾರಿಕೊಂಡಿದ್ದರು ಗಂಗಾಧರನ್. 

ಪುಸ್ತಕ ಓದಿ, ಯುವತಿಯೊಬ್ಬಳು ತನ್ನ ಗಂಡನಿಗೆ ಡೈವೋರ್ಸ್ ನೀಡಿ, ನನ್ನನ್ನು ಮದುವೆಯಾಗುವುದಾಗಿ ದುಂಬಾಲು ಬಿದ್ದಿದ್ದಳು. ಕೊನೆಗೆ ಆಕೆಗೆ ಗಂಗಾಧರನ್ ತಮ್ಮ ಪತ್ನಿಯಿಂದ ಬುದ್ದಿ ಹೇಳಿಸಬೇಕಾಯಿತಂತೆ.

ಒಮ್ಮೆ ಕನ್ನಡ ಭವನಕ್ಕೆ ಹೋಗಿ, ಎರಡು ಪುಸ್ತಕಗಳನ್ನು ಕೊಟ್ಟು ಸ್ವೀಕೃತಿ ಪತ್ರ ಪಡೆದು ಹೋಗುತ್ತಿದ್ದರಂತೆ.  ಆಗ ಅಲ್ಲಿದ್ದ ಇಬ್ಬರು ವಿದ್ವಾಂಸರು ಗಂಗಾಧರನ್ ಅವರನ್ನು ಕಡೆದು ಮಾತನಾಡಿಸಿ ಶಕೀಲ ಪುಸ್ತಕದ ಅನುವಾದ ಚೆನ್ನಾಗಿದೆ ಎಂದು ಹೊಗಳಿದರಂತೆ. ಕೊನೆಗೂ ಕನ್ನಡ ಭವನದಲ್ಲಿ ನನಗೆ ಕಾಫಿಯ ಗೌರವ ಕೊಡಿಸಿದ್ದು ಶಕೀಲ ಎಂಬ ನಟಿ ಎಂದು ನಕ್ಕು ಹೊರಬಂದಿದ್ದರಂತೆ ಗಂಗಾಧರನ್.

ಅಷ್ಟೇ ಏಕೆ, ಪುಸ್ತಕದಲ್ಲಿ ತಾನೇ ತನ್ನ ತಾಯಿಯ ಬಗ್ಗೆ ಹೇಳಿದ್ದ ಮಾತನ್ನು ಪತ್ರಕರ್ತರು ಪ್ರಶ್ನಿಸಿದಾಗ ತಾನು ಹಾಗೆ ಹೇಳೇ ಇಲ್ಲ ಎಂದು ಹಠ ಸಾಧಿಸಿದ್ದರಂತೆ ಶಕೀಲ. ಇನ್ನು ಶಕೀಲಾ ಅವರ ಜೀವನ ಚರಿತ್ರೆ ಓದಿ ಕನ್ನಡದ ಮೂವರು ನಟಿಯರು ಫೋನ್ ಮಾಡಿ ಕಣ್ಣೀರಿಟ್ಟಿದ್ದರಂತೆ.

ಆದರೆ, ಅದೆಲ್ಲಕ್ಕಿಂತ ಮಿಗಿಲಾದದ್ದು ಆಟೋ ಡ್ರೈವರ್ ಒಬ್ಬರ ಕಮೆಂಟ್. ಆಟೋದಲ್ಲಿ ಹೋಗುತ್ತಿದ್ದಾಗ ಜೊತೆಗಿದ್ದ ಮಿತ್ರರೊಬ್ಬರು ನೀವೀಗ ಕೆ.ಕೆ. ಗಂಗಾಧರನ್ ಅಲ್ಲ, ಶಕೀಲ ಗಂಗಾಧರನ್ ಎಂದು ರೇಗಿಸಿದರಂತೆ. ಆಟೋ ಡ್ರೈವರ್ ತಕ್ಷಣ ಆಟೋವನ್ನು ಬದಿಯಲ್ಲಿ ನಿಲ್ಲಿಸಿ, ಶಕೀಲಾ ಪುಸ್ತಕ ಬರೆದಿದ್ದು ನೀವಾ ಸರ್, ಸಖತ್ತಾಗಿದೆ.. ಎಂದು ಹೇಳಿ ಮೆಚ್ಚಿದ್ದನಂತೆ. 

ಹೀಗೆ ಶಕೀಲಾ ಪುಸ್ತಕ ಹಲವು ವರ್ಷಗಳ ನಂತರವೂ ಕಾಡುತ್ತಿದೆ ಎಂಬುದನ್ನು ಗಂಗಾಧರನ್ ಸ್ಮರಿಸಿಕೊಂಡಿದ್ದಾರೆ.