ಲೇಡಿಸ್ ಟೈಲರ್. ಸಿದ್ಲಿಂಗು ಹಾಗೂ ನೀರ್‍ದೋಸೆ ಚಿತ್ರಗಳ ನಂತರ ವಿಜಯ್ ಪ್ರಸಾದ್ ನಿರ್ದೇಶಿಸುತ್ತಿರುವ ಚಿತ್ರ. ಚಿತ್ರಕ್ಕೆ ಹೀರೋಯಿನ್ ಬೇಕಿತ್ತೇನೋ ನಿಜ, ಆದರೆ, ಅದಕ್ಕೆ ಯಾರೂ ರೆಡಿ ಇರಲಿಲ್ಲ. ಕಥೆಯ ಪಾತ್ರಕ್ಕೆ ನಾಯಕಿ 120 ಕೆಜಿ ತೂಕ ಇರಬೇಕು. ಯಾರು..ಯಾರು..ಯಾರು ಎಂದು ಹುಡುಕುತ್ತಿದ್ದವರಿಗೆ ಶ್ರುತಿ ಹರಿಹರನ್ ಸಿಕ್ಕಿದ್ದಾರೆ.
ಸ್ಟಾರ್‍ಗಿರಿಯನ್ನು ಮೂಟೆ ಕಟ್ಟಿಟ್ಟು, ಒಳ್ಳೆಯ ಪಾತ್ರಗಳ ಹುಡುಕಾಟದಲ್ಲಿರುವ ಶ್ರುತಿ ಹರಿಹರನ್, ಕಥೆಯನ್ನು ಒಪ್ಪಿಕೊಂಡಿದ್ದಾರೆ. ಅಂದಹಾಗೆ ಚಿತ್ರದ ನಾಯಕರಾಗಿ ಸಿಲ್ಲಿಲಲ್ಲಿ ರವಿಶಂಕರ್ ಪಕ್ಕಾ ಆಗಿದ್ದಾರಂತೆ. ಚಿತ್ರದಲ್ಲಿ ಸುಮನ್ ರಂಗನಾಥ್ ವಿಶೇಷ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ವೀಣಾ ಸುಂದರ್, ವೆಂಕಟರಾವ್ ಕೂಡಾ ಪ್ರಮುಖ ಪಾತ್ರದಲ್ಲಿದ್ದಾರೆ.
ವಿಜಯ್ ಪ್ರಸಾದ್ ಅವರ ಚಿತ್ರಗಳಿಗೆ ಈ ರೀತಿ ಸಮಸ್ಯೆಯಾಗುವುದು ಇದು ಮೊದಲೇನೂ ಅಲ್ಲ. ಅವರ ಹಿಂದಿನ ಎರಡೂ ಚಿತ್ರಗಳು ಇದೇ ರೀತಿಯ ಸಮಸ್ಯೆ ಎದುರಿಸಿದ್ದವು. ನಂತರ ಎರಡೂ ಚಿತ್ರಗಳು ತಮ್ಮ ವಿಭಿನ್ನತೆಯ ಕಾರಣದಿಂದಲೇ ಮೆಚ್ಚುಗೆ ಗಳಿಸಿದ್ದವು. ಅದು ಲೇಡಿಸ್ ಟೈಲರ್ ಚಿತ್ರದಲ್ಲೂ ಕಂಟಿನ್ಯೂ ಆಗಿದೆ ಅಷ್ಟೆ.