ಟೈಗರ್ ಗಲ್ಲಿ. ನೀನಾಸಂ ಸತೀಶ್ ಅಭಿನಯದ ಸಿನಿಮಾ. ಇದುವರೆಗೆ ಸಾಫ್ಟ್ ಕ್ಯಾರೆಕ್ಟರ್‍ಗಳಲ್ಲೇ ಕಾಣಿಸಿಕೊಳ್ಳುತ್ತಿದ್ದ ನೀನಾಸಂ ಸತೀಶ್, ಈ ಚಿತ್ರದಲ್ಲಿ ಒರಟು ಸ್ವಭಾವದ ರೌಡಿಯಾಗಿ ಕಾಣಿಸಿಕೊಂಡಿದ್ದಾರೆ. ರಂಗಭೂಮಿಯಿಂದ ಬಂದವರಾದ್ದರಿಂದ, ಸತೀಶ್‍ಗೆ ಇಂತಹ ಪರಕಾಯ ಪ್ರವೇಶ ಕಷ್ಟವೇನೂ ಆಗಿಲ್ಲ. ಆದರೆ, ಆತಂಕ ಇರೋದು ಜನ ಹೇಗೆ ಸ್ವೀಕರಿಸುತ್ತಾರೋ ಎಂಬ ಬಗ್ಗೆ.
ಆದರೆ, ನಿಮಗೆ ಹೇಳುತ್ತಿರುವ ವಿಷಯ ಅದಲ್ಲ. ಟೈಗರ್ ಗಲ್ಲಿ ಎಂಬುದು ಕಾಲ್ಪನಿಕ ಕಥೆಯೇ ಆದರೂ, ಟೈಗರ್ ಗಲ್ಲಿ ಎಂಬ ಹೆಸರು ಕಾಲ್ಪನಿಕವಲ್ಲ. ಬೆಂಗಳೂರಿನಲ್ಲಿ ಅಂಥಾದ್ದೊಂದು ಏರಿಯಾ ಇದೆ.
ಮಾರ್ಕೆಟ್ ಸುತ್ತ ಇರುವ 18 ಪೇಟೆಗಳಲ್ಲಿ ತಿಗಳರ ಪೇಟೆ ಇದೆಯಲ್ಲ..ಆ ಏರಿಯಾದಲ್ಲೊಂದು ಡೆಡ್ ಎಂಡ್ ಇದೆ. ಅದಕ್ಕೆ ಪೀಡೆ ಸಂದಿ ಎಂದು ಕೂಡಾ ಕರೀತಾರೆ. ಪೊಲೀಸರು ಎನ್‍ಕೌಂಟರ್ ಮಾಡೋಕೆ ರೌಡಿಗಳನ್ನು ಕರೆದುತರುತ್ತಿದ್ದ ಜಾಗವಂತೆ ಅದು. ಅದು ಜೈರಾಜ್, ಕೊತ್ವಾಲ, ಸೋಮನಂತವರು ಓಡಾಡಿದ್ದ ಜಾಗ. ಹೀಗಾಗಿ ಅದಕ್ಕೆ ಟೈಗರ್ ಗಲ್ಲಿ ಎಂಬ ಹೆಸರೂ ಇದೆ.
ಅಲ್ಲಿ ನಡೆಯುವ ಒಬ್ಬ ತಾಯಿ ಮಗನ ಕಥೆಯಾದ್ದರಿಂದ ಚಿತ್ರಕ್ಕೆ ಟೈಗರ್ ಗಲ್ಲಿ ಅನ್ನೋ ಹೆಸರಿಡಲಾಗಿದೆಯಂತೆ. ಇದು ರವಿ ಶ್ರೀವತ್ಸ ನಿರ್ದೇಶನದ ಚಿತ್ರ. ಎಂ.ಎನ್. ಕುಮಾರ್ ನಿರ್ಮಾಣದ ಚಿತ್ರಕ್ಕೆ ಭಾವನಾ ರಾವ್ ಹಾಗೂ ರೋಶನಿ ನಾಯಕಿಯರು. ಚಿತ್ರ ಇದೇ ಅಕ್ಟೋಬರ್ 27ಕ್ಕೆ ತೆರೆಗೆ ಬರುತ್ತಿದೆ.