ಶರಣ್ ಅಭಿನಯದ, ದಯಾಳ್ ಪದ್ಮನಾಭ್ ನಿರ್ದೇಶನದ ಸತ್ಯ ಹರಿಶ್ಚಂದ್ರ ಬಿಡುಗಡೆಗೂ ಮುನ್ನ ಭರ್ಜರಿ ಸದ್ದು ಮಾಡುತ್ತಿದೆ. ಮೊದಲು ಕುಲದಲ್ಲಿ ಕೀಳ್ಯಾವುದೋ ಚಿತ್ರದಿಂದ ಸೌಂಡ್ ಮಾಡಿದ್ದ ಚಿತ್ರ, ನಂತರ ಹಲವಾರು ವಿಶೇಷಗಳಿಂದ ಕುತೂಹಲ ಹೆಚ್ಚಿಸುತ್ತಲೇ ಇದೆ. ಶರಣ್ ಚಿತ್ರವಾದ್ದರಿಂದ ನಗುವಿಗೆ ಮೋಸವಿಲ್ಲ. ಕಾಮಿಡಿಗೆ ಬರವಿಲ್ಲ.
ಇನ್ನು ಚಿತ್ರತಂಡದವರ ಖುಷಿ ಹೆಚ್ಚಿಸಿರುವುದು ಇದಷ್ಟೇ ಅಲ್ಲ, ಚಿತ್ರರಂಗದ ಹಲವು ಕಲಾವಿದರು ಸತ್ಯ ಹರಿಶ್ಚಂದ್ರ ಚಿತ್ರವನ್ನು ಮೆಚ್ಚಿಕೊಂಡಿದ್ದಾರೆ. ಆ ಚಿತ್ರದ ಟ್ರೇಲರ್‍ನ್ನು ಶಿವಣ್ಣ ನೋಡಿದ್ದು ಕೂಡಾ ಆಕಸ್ಮಿಕ. ಕೆ.ಮಂಜು ಅವರಿಗೆ ಶಿವರಾಜ್ ಕುಮಾರ್‍ಗಾಗಿ ಚಿತ್ರವೊಂದನ್ನು ನಿರ್ಮಿಸಬೇಕು ಎಂಬ ಕನಸಿದೆ. ಹೀಗಾಗಿ ಸತ್ಯ ಹರಿಶ್ಚಂದ್ರ ಚಿತ್ರದ ನಿರ್ದೇಶಕ ದಯಾಳ್ ಜೊತೆ ಕಥೆಯೊಂದನ್ನು ಹೇಳಲು ಹೋಗಿದ್ದಾಗ, ಶಿವಣ್ಣ ಟ್ರೇಲರ್ ನೋಡುವ ಆಸೆ ಹೇಳಿಕೊಂಡಿದ್ದಾರೆ. ಚಿತ್ರದ ಟ್ರೇಲರ್ ನೋಡಿದ ನಂತರ, ದೀಪಾವಳಿಗೆ ಒಳ್ಳೆ ಸಿನಿಮಾ ಕೊಡುತ್ತಿದ್ದೀರಿ ಎಂದು ಹೊಗಳಿದರಂತೆ ಶಿವರಾಜ್ ಕುಮಾರ್.
ಸಿನಿಮಾ ಮೇಕಿಂಗ್ ಶಿವಣ್ಣಗೆ ಇಷ್ಟವಾಗಿದೆ. ಶರಣ್, ಸಂಚಿತಾ ಪಡುಕೋಣೆ ಹಾಗೂ ಭಾವನಾ ರಾವ್ ಅಭಿನಯದ ಚಿತ್ರದಲ್ಲಿ ಸತ್ಯ ಮತ್ತು ಸುಳ್ಳಿನ ಕಥೆಯಿದೆ. ಅದನ್ನು ಹಾಸ್ಯದೊಂದಿಗೆ ಹೇಳಲಾಗಿದೆ. ಸತ್ಯ ಹರಿಶ್ಚಂದ್ರ ಈ ದೀಪಾವಳಿಗೆ ಪ್ರೇಕ್ಷಕರ ಎದೆಯಲ್ಲಿ ನಗೆಯ ಪಟಾಕಿ ಹಚ್ಚಲಿದ್ದಾನೆ.