` ಕೆಜಿಎಫ್ ಪಾರ್ಟ್ 2 ಬರುತ್ತಾ..? - chitraloka.com | Kannada Movie News, Reviews | Image

User Rating: 5 / 5

Star activeStar activeStar activeStar activeStar active
 
kgf in two parts?
Yash In KGF

ರಾಜಾಮೌಳಿಯ ಬಾಹುಬಲಿ ರಿಲೀಸ್‍ಗೂ ಮೊದಲೇ ಇದು ಸೀಕ್ವೆಲ್‍ಗಳಲ್ಲಿ ಬರಲಿದೆ ಎಂದು ಘೋಷಿಸಿಕೊಂಡಿತ್ತು. ರಾಮ್ ಗೋಪಾಲ್ ವರ್ಮಾನ ರಕ್ತಚರಿತ್ರೆ ಕೂಡಾ ಹಾಗೆಯೇ ಮೊದಲೇ ಘೋಷಿಸಿಕೊಂಡು ಬಂದಿದ್ದ ಸರಣಿ ಚಿತ್ರಗಳು. ಕನ್ನಡದಲ್ಲಿ ಆ ಟ್ರೆಂಡ್ ಹುಟ್ಟು ಹಾಕಿದ್ದು ಕೆಂಡ ಸಂಪಿಗೆ. ಆದರೆ, ಅದೇಕೋ ಏನೋ.. ಆ ಸರಣಿಯ 2ನೇ ಭಾಗ ತೆರೆಗೆ ಬಂದು ಹಿಟ್ ಆದರೂ, ಮೊದಲನೇ ಭಾಗ ಇನ್ನೂ ತೆರೆ ಕಂಡಿಲ್ಲ. ಹೀಗಿರುವಾಗಲೇ, ಕೆಜಿಎಫ್ ಅದೇ ರೀತಿ ಸೀಕ್ವೆಲ್‍ಗಳಲ್ಲಿ ಬರಲಿದೆ ಎಂಬ ಸುದ್ದಿ ಹರಿದಾಡೋಕೆ ಶುರುವಾಗಿದೆ.

ಉಗ್ರಂ ಖ್ಯಾತಿಯ ಪ್ರಶಾಂತ್ ನೀಲು, ರಾಕಿಂಗ್ ಸ್ಟಾರ್ ಯಶ್ ಹಾಗೂ ನಿರ್ಮಾಪಕ ವಿಜಯ್ ಕಿರಗಂದೂರು ಒಟ್ಟಿಗೇ ಸೇರಿದ್ದಾರೆ ಎಂಬ ಸುದ್ದಿ ಹೊರಬಿದ್ದ ದಿನದಿಂದಲೂ ಕೆಜಿಎಫ್ ನಿರೀಕ್ಷೆ ಹುಟ್ಟಿಸುತ್ತಲೇ ಇದೆ. ಆದರೆ, ಚಿತ್ರ ತಂಡ ಹೊರಗೆ ಮಾತನಾಡುವುದಿಲ್ಲ. ಇಂತಹ ಸುದ್ದಿಗಳಿಗೆ ಸದ್ಯಕ್ಕಂತೂ ಬರವಿಲ್ಲ. ಸದ್ಯಕ್ಕಂತೂ ಗಾಂಧಿನಗರದಲ್ಲಿ ಕೆಜಿಎಫ್ ಚಿತ್ರದ ಸೀಕ್ವೆಲ್ ಬರಲಿದೆ ಎಂಬ ಸುದ್ದಿ ಗಾಂಧಿ ನೋಟಿನಷ್ಟೇ ಸರಾಗವಾಗಿ ಓಡಾಡುತ್ತಿದೆ.

ಚಿತ್ರದಲ್ಲಿ 1970ರ ದಶಕದ ಕಥೆಯಿದೆಯಂತೆ. ಚಿತ್ರದಲ್ಲಿ 500ಕ್ಕೂ ಹೆಚ್ಚು ಗಡ್ಡಧಾರಿಗಳಿದ್ದಾರಂತೆ. ಇಂತಹ ಸುದ್ದಿಗಳ ಮಧ್ಯೆ ಈಗ ಇನ್ನೊಂದು ಸುದ್ದಿ.. ಕೆಜಿಎಫ್ ಚಿತ್ರದ ಎರಡು ಭಾಗದಲ್ಲಿ ರಿಲೀಸ್ ಆಗಲಿದೆಯಂತೆ. ಸದ್ಯಕ್ಕಿದು ಅಂತೆ ಕಂತೆ ಸುದ್ದಿ ಮಾತ್ರ.