` ಕಣ್ಣು ಮುಚ್ಚುತ್ತಿದೆ ಕಪಾಲಿ - chitraloka.com | Kannada Movie News, Reviews | Image

User Rating: 5 / 5

Star activeStar activeStar activeStar activeStar active
 
kapali's eyes to be closed down
Kapali Theater

ಕಪಾಲಿ ಥಿಯೇಟರ್. ಬೆಂಗಳೂರಿಗೆ ಎಂಟ್ರಿ ಕೊಟ್ಟು ಮೆಜೆಸ್ಟಿಕ್​ನ ಹಿಂಭಾಗಕ್ಕೆ ಬಂದರೆ ಸಾಕು..ಅಲ್ಲಿ ಎದ್ದು ಕಾಣುತ್ತಿತ್ತು ಕಪಾಲಿ ಚಿತ್ರಮಂದಿರ. ಬೆಂಗಳೂರಿಗೆ ಸ್ವಾಗತ ಕೋರುವ ಹಲವು ಸ್ಮಾರಕಗಳಲ್ಲಿ ಕಪಾಲಿ ಕೂಡಾ ಒಂದು. ಅದು ಗಾಂಧಿನಗರಕ್ಕೆ ಮುಕುಟದಂತೆಯೂ, ಚಿತ್ರರಂಗಕ್ಕೆ ಕಣ್ಮಣಿಯಂತೆಯೂ ಕಂಗೊಳಿಸುತ್ತಿತ್ತು.

ಆ ಥಿಯೇಟರಿನ ಇತಿಹಾಸವಾದರೂ ಎಂಥದ್ದು..? ಆ ಟಾಕೀಸ್​ನ್ನು ಉದ್ಘಾಟಿಸಿದ್ದವರು ಪ್ರಧಾನಿಯಾಗಿದ್ದ ಮೊರಾರ್ಜಿ ದೇಸಾಯಿ. ಸುಭೇದಾರ್ ಛತ್ರಂ ರಸ್ತೆಯಲ್ಲಿದ್ದ ಈ ಚಿತ್ರಮಂದಿರ ಉದ್ಘಾಟನೆಯಾಗಿದ್ದು 1968ರಲ್ಲಿ. 44,184 ಚದರ ಅಡಿ ಜಾಗದಲ್ಲಿದ್ದ ಬೃಹತ್ ಚಿತ್ರಮಂದಿರ ಕಪಾಲಿ. ಆರಂಭದಲ್ಲಿ 1,465 ವ್ಯವಸ್ಥೆಯಿತ್ತು. ನಂತರ, ಅದನ್ನು 1,112ಕ್ಕೆ ಇಳಿಸಲಾಗಿತ್ತು. ಅದು ಹಿಂದಿ ಚಿತ್ರಗಳಿಗಾಗಿ. ಈ ಟಾಕೀಸ್​ನಲ್ಲಿ ಯಾವುದೇ ಸಿನಿಮಾ 7 ವಾರ ಓಡಿದರೆ, ಅದು ಯಶಸ್ವಿ ಸಿನಿಮಾ ಎನ್ನುವ ನಂಬಿಕೆ ಗಾಂಧಿನಗರದಲ್ಲಿತ್ತು. 

ಏಷ್ಯಾದ ಅತಿ ದೊಡ್ಡ, ವಿಶ್ವದ 2ನೇ ಅತಿದೊಡ್ಡ ಚಿತ್ರಮಂದಿರ ಎಂಬ ಖ್ಯಾತಿ ಕಪಾಲಿಗಿತ್ತು. ಇನ್ನೊಂದು ವರ್ಷ ಕಳೆದಿದ್ದರೆ, ಚಿತ್ರಮಂದಿರ 50 ವರ್ಷ ಪೂರೈಸುತ್ತಿತ್ತು. ಈಗ 50 ತುಂಬುವ ಒಂದು ವರ್ಷ ಮೊದಲೇ ಕಣ್ಣು ಮುಚ್ಚುತ್ತಿದೆ.

ಕಪಾಲಿಯಲ್ಲಿ ಪ್ರದರ್ಶನ ಕಂಡ ಮೊದಲ ಚಿತ್ರ ‘ದಿಸ್ ಈಸ್ ಸಿನೆರಮಾ' ಅನ್ನೋ ಚಿತ್ರ. ಕಪಾಲಿಯಲ್ಲಿ ಕನ್ನಡ ಚಿತ್ರಗಳ ಉದ್ಘಾಟನೆಯಾಗಿದ್ದು  ಡಾ. ರಾಜ್ ಅವರ 'ಮಣ್ಣಿನ ಮಗ' ಚಿತ್ರದಿಂದ. ಕಪಾಲಿಯಲ್ಲಿ ಶತದಿನೋತ್ಸವ ಆಚರಿಸಿದ ಮೊದಲ ಚಿತ್ರ ಕೂಡಾ ಮಣ್ಣಿನ ಮಗ. 

ಅಣ್ಣಾವ್ರ ಹಾಲು ಜೇನು ಚಿತ್ರ ಬಿಡುಗಡೆಯಾದಾಗ, ರಾಜ್ ಅವರ 58 ಅಡಿ ಎತ್ತರದ ಕಟೌಟ್ ನಿಲ್ಲಿಸಿದ್ದು, ಸಾರ್ವಕಾಲಿಕ ದಾಖಲೆ. 

ಹಿಂದಿ ಚಿತ್ರರಂಗದ ಬ್ಲಾಕ್​ಬಸ್ಟರ್ ಚಿತ್ರ ಶೋಲೆ, ಕಪಾಲಿಯಲ್ಲಿ 6 ತಿಂಗಳು ಪ್ರದರ್ಶನವಾಗಿತ್ತು. ಶಿವರಾಜ್ ಕುಮಾರ್ ಅವರ ಓಂ, 30 ಬಾರಿ ಪ್ರದರ್ಶನ ಕಂಡಿತ್ತು. ಡಾ. ರಾಜ್​ಗಷ್ಟೇ ಅಲ್ಲ, ತೆಲುಗಿನ ಚಿರಂಜೀವಿ, ಹಿಂದಿಯ ಅಮಿತಾಭ್, ಕನ್ನಡದ ಕ್ರೇಜಿ ಸ್ಟಾರ್ ರವಿಚಂದ್ರನ್​, ಶಿವರಾಜ್​ ಕುಮಾರ್​ಗೆ ಇದು ಅದೃಷ್ಟದ ಚಿತ್ರಮಂದಿರ.

ಪ್ರೇಮಲೋಕದ ಇತಿಹಾಸ ಸೃಷ್ಟಿಯಾಗಿದ್ದು, ಓಂ ದಾಖಲೆಯ ಓಂಕಾರ ಬರೆದಿದ್ದು, ಹಾಲು ಜೇನಿನ ಮಳೆ ಸುರಿದಿದ್ದು, ಹೊಸ ಬೆಳಕು ಮೂಡಿದ್ದು, ಜೀವನ ಚೈತ್ರ, ಒಡಹುಟ್ಟಿದವರು, ಆಕಸ್ಮಿಕ, ಶಬ್ಧವೇದಿ.. ಹೀಗೆ.. ದಾಖಲೆಗಳ ಮೇಲೆ ದಾಖಲೆಗಳು ಈ ಚಿತ್ರಮಂದಿರಕ್ಕಿವೆ.

ಬೆಂಗಳೂರಿನ ಐತಿಹಾಸಿಕ ದುರಂತ ಗಂಗಾರಾಮ್ ಬಿಲ್ಡಿಂಗ್ ಕುಸಿದಾಗ, ಕಪಾಲಿಯ ಗೋಡೆಯೂ ಕುಸಿದಿತ್ತು. ಶಬ್ಧವೇದಿ, ಹೆಚ್​2ಓ ಚಿತ್ರಗಳ ರಿಲೀಸ್ ವೇಳೆ ನಡೆದ ಗಲಾಟೆಯಲ್ಲಿ ಥಿಯೇಟರ್​ಗೆ ಕಲ್ಲೇಟು ಬಿದ್ದಿತ್ತು. 

ಹೀಗೆ ಕನ್ನಡ ಚಿತ್ರರಂಗದ ಇತಿಹಾಸವನ್ನೇ ತನ್ನ ಮಡಿಲಲ್ಲಿ ಅಡಗಿಸಿಕೊಂಡಿದ್ದ ಕಪಾಲಿ ಈಗ ಕಣ್ಮುಚ್ಚುತ್ತಿದೆ. ಆ ಜಾಗದಲ್ಲಿ ಮಲ್ಟಿಪ್ಲೆಕ್ಸ್ ತಲೆ ಎತ್ತಲಿದೆ. ಒಂದು ಕಪಾಲಿ ಇದ್ದ ಜಾಗದಲ್ಲಿ 6 ಸಿಂಗಲ್ ಸ್ಕ್ರೀನ್​ಗಳು ಬರಲಿವೆ. ಆದರೆ, ಅದು ಕಪಾಲಿಯಾಗಿರಲ್ಲ.

Related Articles :-

Kapali Theater Demolition Started - Exclusive