ಚಾಲೆಂಜಿಂಗ್ ಸ್ಟಾರ್ ದರ್ಶನ್ ಚಿತ್ರಗಳಲ್ಲಿ ತಾರಕ್‍ನ ವಿಶೇಷತೆಯೇ ಬೇರೆ. ಈ ಚಿತ್ರದಲ್ಲಿ ದರ್ಶನ್ ಜೊತೆಗೆ ಕನ್ನಡ ಚಿತ್ರರಂಗದ ದೊಡ್ಡ ದೊಡ್ಡ ಕಲಾವಿದರೆಲ್ಲ ಸೇರಿ ಹಬ್ಬವನ್ನೇ ಸೃಷ್ಟಿಸಿಬಿಟ್ಟಿದ್ದಾರೆ. ಇತ್ತೀಚೆಗೆ ರಾಜಕುಮಾರ, ಮುಗುಳುನಗೆ ಚಿತ್ರಗಳಲ್ಲಿ ಇಂಥಾದ್ದೊಂದು ಜಾತ್ರೆ ಸೇರಿತ್ತು. ಅದೀಗ ತಾರಕ್‍ನಲ್ಲಿಯೂ ಮುಂದುವರೆದಿದೆ.
ಹಾಗೇ ನೋಡಿ, ದರ್ಶನ್, ಚಿತ್ರದ ಹೀರೋ. ಚಿತ್ರಕ್ಕಾಗಿ ಮೈಕಟ್ಟನ್ನೆಲ್ಲ ಹುರಿಗೊಳಿಸಿ ತಯಾರಾಗಿದ್ದಾರೆ. ಇನ್ನು ದರ್ಶನ್ ತಾತನಾಗಿರುವ ಡೈನಮಿಕ್ ಸ್ಟಾರ್ ದೇವರಾಜ್, 80ರ ವಯಸ್ಸಿನ ಅಜ್ಜನ ಪಾತ್ರದಲ್ಲಿದ್ದಾರೆ. ಅಷ್ಟು ದೊಡ್ಡ ವಯಸ್ಸಿನ ವೃದ್ಧನಾಗಿ ನಟಿಸುತ್ತಿರುವುದು ದೇವರಾಜ್‍ಗೂ ಹೊಸ ಅನುಭವ.
ಇನ್ನು ಶೃತಿ ಹರಿಹರನ್ ನಾಯಕಿ. ಈ ರಾಜ್ಯ ಪ್ರಶಸ್ತಿ ವಿಜೇತ ನಟಿಗೆ ದರ್ಶನ್ ಜೊತೆ ಮೊದಲ ಚಿತ್ರ. ಇನ್ನು ಸ್ಯಾಂಡಲ್‍ವುಡ್‍ನ ಸುಂದರ ದೆವ್ವ ಎಂದೇ ತಮಾಷೆಯಿಂದ ಕರೆಯಲ್ಪಡುತ್ತಿರುವ ಶಾನ್ವಿ ಶ್ರೀವಾಸ್ತವ್ ಚಿತ್ರದ ಇನ್ನೊಬ್ಬ ನಾಯಕಿ.
ದೇವರಾಜ್ ಅಳಿಯನ ಪಾತ್ರದಲ್ಲಿ ಅವಿನಾಶ್, ಅವರ ಪತ್ನಿಯಾಗಿ ಚಿತ್ರಾ ಶೆಣೈ, ಅರವಿಂದ್, ಭಾಗ್ಯಶ್ರೀ, ಕುಲದೀಪ್, ರಕ್ಷಾ ಹೊಳ್ಳ, ಕುರಿ ಪ್ರತಾಪ್..ಹೀಗೆ ಕಲಾವಿದರ ದಂಡೇ ಇದೆ.
ಚಿತ್ರದಲ್ಲಿ ವಸ್ತ್ರ ವಿನ್ಯಾಸ ಮಾಡಿರುವುದು ನಿರ್ದೇಶಕ ಪ್ರಕಾಶ್ ಅವರ ಪತ್ನಿ ಅಶ್ವಿನಿ ಹಾಗೂ ಅವರ ಸ್ನೇಹಿತೆ ಪ್ರತೀಕ್ಷಾ. ಒಟ್ಟಿನಲ್ಲಿ ತಾರಕ್ ನೋಡಿದರೆ, ಹಬ್ಬದ ಮನೆ ನೋಡಿದಂತಾಗುವುದು ಸುಳ್ಳಲ್ಲ.