ಪುನೀತ್ ರಾಜ್ಕುಮಾರ್ ನಿರ್ಮಾಪಕರಾಗುತ್ತಿದ್ದಾರೆ. ಹಾಗೆಂದು ಅವರಿಗೆ ಚಿತ್ರ ನಿರ್ಮಾಣ ಹೊಸದೇನೂ ಅಲ್ಲ. ಈ ಹಿಂದೆ ತಂದೆ, ಅಣ್ಣಂದಿರ ಚಿತ್ರಗಳ ನಿರ್ಮಾಣದ ಹೊಣೆ ಹೊತ್ತು ಕೆಲಸ ಮಾಡಿದ ಅನುಭವ ಇದೆ. ಆದರೆ, ಈ ಬಾರಿ ಅವರು ಇಡುತ್ತಿರುವುದು ಕುಟುಂಬದ ಹಳೆಯ ಚಿತ್ರ ನಿರ್ಮಾಣ ಸಂಸ್ಥೆಯಿಂದ ಅಲ್ಲ. ಪಿಆರ್ಕೆ ಪ್ರೊಡಕ್ಷನ್ಸ್ ಎಂಬ ಸಂಸ್ಥೆಯ ಮೂಲಕ ಚಿತ್ರ ನಿರ್ಮಾಣಕ್ಕಿಳಿದಿದ್ದಾರೆ ಪುನೀತ್ ರಾಜ್ಕುಮಾರ್. ಅವರು ನಿರ್ಮಿಸುತ್ತಿರುವ ಚಿತ್ರ ಕವಲು ದಾರಿ.
ನಿರ್ಮಾಪಕಿ ಸ್ಥಾನದಲ್ಲಿ ಅಶ್ವಿನಿ ಪುನೀತ್ ಇದ್ದಾರೆ. ಹೊಸ ಸಂಸ್ಥೆಯ ಮೂಲಕ, ಹೊಸ ಪ್ರತಿಭೆಗಳಿಗೆ ಅವಕಾಶ ಕೊಡುತ್ತಿರುವ ಪುನೀತ್, ಈ ಚಿತ್ರದಲ್ಲಿ ಆಪರೇಷನ್ ಅಲಮೇಲಮ್ಮ ಖ್ಯಾತಿಯ ರಿಷಿಯನ್ನು ನಾಯಕರನ್ನಾಗಿಸಿದ್ದಾರೆ. ಚಿತ್ರದ ನಿರ್ದೇಶಕ ಗೋಧಿಬಣ್ಣ ಸಾಧಾರಣ ಮೈಕಟ್ಟು ಖ್ಯಾತಿಯ ಹೇಮಂತ್ ರಾವ್. ನಾಯಕಿಯಾಗಿರುವು ರೋಶನಿ ಪ್ರಕಾಶ್. ನಟ ಅನಂತ್ ನಾಗ್ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ.
ತಮ್ಮನ ಹೊಸ ಸಾಹಸಕ್ಕೆ ಶುಭ ಕೋರಿದ್ದು ಅಣ್ಣ ಶಿವರಾಜ್ ಕುಮಾರ್. ಚಿತ್ರದ ಮೊದಲ ದೃಶ್ಯಕ್ಕೆ ಕ್ಲಾಪ್ ಮಾಡಿದ್ದು ಕೂಡಾ ಅವರೇ. ಮುಹೂರ್ತದ ಸ್ಥಳಕ್ಕೆ ಆಗಮಿಸಿದ ಅಣ್ಣನಿಗೆ ಪುನೀತ್ ರಾಜ್ಕುಮಾರ್ ನಮಸ್ಕರಿಸಿದಾಗ, ಪ್ರೀತಿಯಿಂದ ಅಪ್ಪಿಕೊಂಡು ಆಶೀರ್ವದಿಸಿದ್ದಾರೆ ಶಿವಣ್ಣ. ಚಿತ್ರದ ಮುಹೂರ್ತದಲ್ಲಿ ರಾಕ್ಲೈನ್ ವೆಂಕಟೇಶ್, ರಕ್ಷಿತ್ ಶೆಟ್ಟಿ, ಗೀತಾ ಶಿವರಾಜ್ ಕುಮಾರ್, ಅಶ್ವಿನಿ ಪುನೀತ್ ರಾಜ್ಕುಮಾರ್ ಕೂಡಾ ಇದ್ದು, ಪುನೀತ್ ಹೊಸ ಸಾಹಸಕ್ಕೆ ಶುಭ ಕೋರಿದರು.