ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ, ರಾಜ್ಯಾದ್ಯಂತ ಬಿರುಗಾಳಿ ಎಬ್ಬಿಸಿದೆ. ದೇಶ, ವಿದೇಶಗಳಲ್ಲಿ ತಲ್ಲಣ ಸೃಷ್ಟಿಸಿದೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಬುದ್ದಿಜೀವಿಗಳು ಖಂಡಿಸುತ್ತಿದ್ದಾರೆ. ಕೊಂದವರು ಯಾರು..? ಏಕೆ ಕೊಂದರು..? ಎಂಬ ಬಗ್ಗೆ ಎಸ್‍ಐಟಿ ಅಧಿಕಾರಿಗಳಿಗೇ ಇನ್ನೂ ಸ್ಪಷ್ಟ ಚಿತ್ರಣ ಸಿಕ್ಕಿಲ್ಲ. ಬುದ್ದಿಜೀವಿಗಳು ಬಲಪಂಥೀಯರ ಮೇಲೆ, ಬಲಪಂಥೀಯರು ನಕ್ಸಲೀಯರ ಮೇಲೆ ದೂರುತ್ತಿದ್ದಾರಾದರೂ, ತನಿಖೆಯಲ್ಲಿ ಮಹತ್ವದ ಪ್ರಗತಿ ಎನ್ನುವುದು ಇನ್ನೂ ಆಗಿಲ್ಲ.
ಈಗಿರುವಾಗಲೇ ಎ ಎಂ ಆರ್ ರಮೇಶ್, ಸಿನಿಮಾ ಮಾಡಲು ಹೊರಟಿದ್ದಾರೆ. ನೈಜ ಕಥೆಯ ಚಿತ್ರಗಳಿಗೆ ಹೆಸರಾಗಿರುವ ರಮೇಶ್, ಗೌರಿ ಲಂಕೇಶ್ ಹತ್ಯೆಯ ಪ್ರತಿ ವಿವರವನ್ನೂ ಕಲೆ ಹಾಕುತ್ತಿದ್ದಾರೆ. ಮೂವರು ವಿಚಾರವಾದಿಗಳ ಹತ್ಯೆ, ಒಂದೇ ಗನ್ನು, ಒಂದೇ ರೀತಿಯ ಕೊಲೆ, ಮನೆ ಮುಂದೆಯೇ ಕೊಲೆ..ಇವಿಷ್ಟೂ ನನ್ನನ್ನು ಗಮನ ಸೆಳೆದ ಅಂಶಗಳು. ಈ ಹಿನ್ನೆಲೆಯನ್ನಿಟ್ಟುಕೊಂಡು ಸಿನಿಮಾ ಮಾಡುತ್ತಿದ್ದೇನೆ ಎನ್ನುತ್ತಾರೆ ರಮೇಶ್.
ತನಿಖೆ ಮುಗಿಯುವ ಮುನ್ನ ಇವರೇ ಹಂತಕರು ಎಂದು ಜಡ್ಜ್‍ಮೆಂಟ್ ಕೊಡುವುದು ತಪ್ಪು ಎನ್ನುವ ರಮೇಶ್, ಹತ್ಯೆ ಮಾಡಿದ್ದನ್ನು ಖಂಡಿಸುತ್ತಾರೆ. ಆದರೆ, ಕೊಲೆಗಾರರು ಯಾರು ಎಂಬುದೇ ಗೊತ್ತಿಲ್ಲದೇ ಇರುವಾಗ, ಸಿನಿಮಾ ಹೇಗೆ ಮಾಡ್ತಾರೆ ಅನ್ನೋದೇ ದೊಡ್ಡ ಕುತೂಹಲ. ಗೌರಿ ಹತ್ಯೆಯ ಸಂಚಿನಷ್ಟೇ ನಿಗೂಢ.