ಜೇಸುದಾಸ್. ಈ ಗಾಯಕ ಹಾಡಿದರೆ, ಎಂಥವರಲ್ಲೂ ಭಕ್ತಿಬಾವ ಉಕ್ಕುವುದು ನಿಜ. ಧರ್ಮದಲ್ಲಿ ಕ್ರೈಸ್ತರಾಗಿದ್ದರೂ, ಹೃದಯದಲ್ಲಿ ಹಿಂದುವೇ ಆಗಿರುವ ಜೇಸುದಾಸ್, ಹಲವು ದೇಗುಲಗಳಲ್ಲಿ ಗಾಯನ ಸೇವೆ ಮಾಡುತ್ತಿದ್ದಾರೆ. ಕೊಲ್ಲೂರು, ತಿರುಪತಿ, ಅಯ್ಯಪ್ಪ, ಮಧುರೈ ಮೀನಾಕ್ಷಿ..ಹೀಗೆ ದೇಶದ ಎಷ್ಟೋ ದೇವರ ನಾಮಗಳು ಜೇಸುದಾಸ್ ಕಂಠಸಿರಿಯಲ್ಲಿ ಮಿಂದೆದ್ದಿವೆ.
ಇಂಥ ಜೇಸುದಾಸ್‍ಗೆ ಕೇರಳದ ಪದ್ಮನಾಭ ಸ್ವಾಮಿ ದೇಗುಲಕ್ಕೆ ಹೋಗುವ ಬಯಕೆಯಿತ್ತು. ಆದರೆ ಆ ದೇವಸ್ಥಾನದಲ್ಲಿ ಹಿಂದೂಗಳಿಗೆ ಮಾತ್ರ ದೇಗುಲ ಪ್ರವೇಶಕ್ಕೆ ಅವಕಾಶವಿತ್ತು. ಕ್ರೈಸ್ತ ಧರ್ಮೀಯರಾದ ಜೇಸುದಾಸ್‍ಗೆ ಪ್ರವೇಶವಿರಲಿಲ್ಲ. ಹಾಗೆ ಬೇರೆ ಧರ್ಮೀಯರು ದೇವರ ದರ್ಶನ ಪಡೆಯಬೇಕೆಂದರೆ, ದೇವಸ್ಥಾನದ ಆಡಳಿತ ಮಂಡಳಿಗೆ ಮನವಿ ಸಲ್ಲಿಸಿ, ಅವರು ಅನುಮತಿ ನೀಡಬೇಕು. ಹಾಗೆ ಮನವಿ ಸಲ್ಲಿಸುವ ಭಕ್ತರು, ತನಗೆ ಹಿಂದೂ ಧರ್ಮದಲ್ಲಿ, ಆಚರಣೆಗಳಲ್ಲಿ ನಂಬಿಕೆಯಿದೆ ಎಂದು ಪ್ರಮಾಣಪತ್ರ ನೀಡಬೇಕು.
ಈ ಎಲ್ಲ ಪ್ರಕ್ರಿಯೆಗಳನ್ನೂ ಪೂರೈಸಿದ ಜೇಸುದಾಸ್‍ಗೆ ಈಗ ಕೇರಳದ ಪದ್ಮನಾಭ ಸ್ವಾಮಿ ದೇಗುಲದ ಬಾಗಿಲು ತೆರೆದಿದೆ. ಆಡಳಿತ ಮಂಡಳಿ ಒಪ್ಪಿಗೆ ನೀಡಿದೆ. ವಿಜಯದಶಮಿಯ ದಿನ ಜೇಸುದಾಸ್ ಪದ್ಮನಾಭ ಸ್ವಾಮಿಯ ದರ್ಶನ ಪಡೆಯಲಿದ್ದಾರೆ. ತಮ್ಮ ಬಹುಕಾಲದ ಪದ್ಮನಾಭ ಸ್ವಾಮಿ ದರ್ಶನದ ಬಯಕೆಯನ್ನು ಈಡೇರಿಸಿಕೊಳ್ಳಲಿದ್ದಾರೆ.