ಇತ್ತೀಚೆಗಷ್ಟೇ ವಿನಯ್ ರಾಜ್ಕುಮಾರ್ ಅಭಿನಯದ ಅನಂತು ವ/ಸ ನುಸ್ರತ್ ಚಿತ್ರದ ಮುಹೂರ್ತವಾಗಿದ್ದು ನಿಮಗೆಲ್ಲ ಗೊತ್ತೇ ಇದೆ. ಹೀಗಿರೋವಾಗ್ಲೇ ಚಿತ್ರಕ್ಕೊಂದು ವಿವಾದ ಅಂಟಿಕೊಂಡಿದೆ. ಅದು ಚಿತ್ರದ ಫೋಟೋಶೂಟ್ಗೆ ಸಂಬಂಧಿಸಿದ್ದು.
ಸಿನಿಮಾದಲ್ಲಿ ವಿನಯ್ ರಾಜ್ಕುಮಾರ್ ವಕೀಲನ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಚಿತ್ರಕ್ಕೆ ಸಂಬಂಧಿಸಿದ ಫೋಟೋಶೂಟ್ ಹೈಕೋರ್ಟ್ ಆವರಣ ಮತ್ತು ಲೈಬ್ರೆರಿಯಲ್ಲಿ ನಡೆಸಲಾಗಿದೆ. ವಿವಾದಕ್ಕೆ ಕಾರಣವಾಗಿರುವುದು ಇದೇ ವಿಚಾರ. ಏಕೆಂದರೆ, ಹೈಕೋರ್ಟ್ ಆವರಣದಲ್ಲಿ ಫೋಟೋ ಅಥವಾ ವಿಡಿಯೋ ತೆಗೆಯುವುದು ನಿಷಿದ್ಧ.
ಭದ್ರತೆಗಾಗಿ ಹೈಕೋರ್ಟ್ ಆವರಣದಲ್ಲಿ ಮೊಬೈಲ್ ಕ್ಯಾಮೆರಾದಲ್ಲಿ ಫೋಟೋ ತೆಗೆಯುವುದನ್ನು ಕೂಡಾ ನಿಷೇಧಿಸಲಾಗಿದೆ. ಸ್ವಾತಂತ್ರ್ಯ ದಿನಾಚರಣೆ, ಗಣರಾಜ್ಯೋತ್ಸವ ಮೊದಲಾದ ರಾಷ್ಟ್ರೀಯ ಹಬ್ಬಗಳ ದಿನ ನಡೆಯುವ ಧ್ವಜಾರೋಹಣದಲ್ಲಿ ಮಾಧ್ಯಮಗಳು ಕ್ಯಾಮೆರಾ ತರಬಹುದು, ವಿಡಿಯೋ ಶೂಟ್ ಮಾಡಬಹುದು. ನಿವೃತ್ತ ನ್ಯಾಯಮೂರ್ತಿಗಳ ಬೀಳ್ಕೊಡುಗೆ ಸಮಾರಂಭಗಳಲ್ಲಿ ಕೂಡಾ ಇದಕ್ಕೆ ಅವಕಾಶವಿದೆ. ಆದರೆ, ಅನಂತು ವ/ಸ ನುಸ್ರತ್ ಫೋಟೋಶೂಟ್ ನಡೆದಿರುವುದು ರಿಜಿಸ್ಟ್ರಾರ್ ಗಮನಕ್ಕೆ ಬಂದಿಲ್ಲ.
ಈ ಕುರಿತು ವಕೀಲ ಜಿ.ಆರ್. ಮೋಹನ್ ಎಂಬುವರು ರಿಜಿಸ್ಟ್ರಾರ್ ಅವರಲ್ಲಿ ಮಾಹಿತಿ ಕೇಳಿದಾಗ ಈ ಮಾಹಿತಿ ಬೆಳಕಿಗೆ ಬಂದಿದೆ. ಆದರೆ, ಈ ಕುರಿತು ಬಾರ್ ಅಸೋಸಿಯೇಷನ್ ಅವರನ್ನು ಸಂಪರ್ಕಿಸಿದಾಗ ಗೊತ್ತಾಗಿರುವುದು ಇಷ್ಟು. ರಾಜ್ ಕುಟುಂಬ ಅನುಮತಿಯಿಲ್ಲದೆ ಶೂಟ್ ಮಾಡಿಲ್ಲ. ಫೋಟೋ ಶೂಟ್ಗೆ ಅನುಮತಿಗಾಗಿ ಸ್ವತಃ ರಾಘವೇಂದ್ರ ರಾಜ್ ಕುಮಾರ್ ಮನವಿ ಮಾಡಿದರು. ಕನ್ನಡ ಮತ್ತು ಕರ್ನಾಟಕಕ್ಕೆ ಇಷ್ಟು ದೊಡ್ಡ ಸೇವೆ ಮಾಡಿರುವ ರಾಜ್ ಕುಟುಂಬದವರ ಮನವಿಗೆ ಇಲ್ಲ ಎನ್ನುವುದು ನಮಗೆ ಸಾಧ್ಯವಿರಲಿಲ್ಲ. ಹೀಗಾಗಿ ಅನುಮತಿ ಕೊಟ್ಟೆವು. ಅವರು ಸಂಘದ ಲೈಬ್ರೆರಿ ಕೋಣೆಯಲ್ಲಿ ಹಾಗೂ ಸಂಘದ ಆವರಣದಲ್ಲಿ ಶೂಟ್ ಮಾಡಿದ್ದಾರೆ. ಇದರಲ್ಲಿ ಪ್ರಮಾದವೇನೂ ಆಗಿಲ್ಲ ಎಂದಿದ್ದಾರೆ.
ಅಲ್ಲದೆ ಶೂಟಿಂಗ್ ನಡೆದಿರುವುದು ಆಗಸ್ಟ್ 15ರಂದು. ಸ್ವಾತಂತ್ರ್ಯ ದಿನಾಚರಣೆಯ ರಜೆ ವೇಳೆ ನಡೆದಿರುವ ಶೂಟಿಂಗ್ನಲ್ಲಿ ಭದ್ರತಾ ಲೋಪವೇನೂ ಆಗಿಲ್ಲ ಎಂಬ ವಾದವೂ ಇದೆ.