ಸಾಧು ಕೋಕಿಲ ಕನ್ನಡ ಚಿತ್ರರಂಗದ ಅತ್ಯಂತ ಬ್ಯುಸಿ ಕಲಾವಿದ. ಸಾಧು ತೆರೆ ಮೇಲೆ ಕಾಣಿಸಿದರೆ ಸಾಕು, ಪ್ರೇಕ್ಷಕರ ಮುಖದಲ್ಲೊಂದು ಸಣ್ಣ ನಗೆ ಅರಳುತ್ತೆ. ಆದರೆ, ಸಾಧು ಮೂಲತಃ ನಟರಲ್ಲ. ಅವರ ಮೊದಲ ಆದ್ಯತೆ ಸಂಗೀತ. ಸಂಗೀತ ನಿರ್ದೇಶಕರಾಗಿ ಅತ್ಯುತ್ತಮ ಹಾಡುಗಳನ್ನು ಕೊಟ್ಟಿರುವ ಸಾಧು, ಅದ್ಭುತ ಕಂಠಸಿರಿಯನ್ನೂ ಹೊಂದಿದ್ದಾರೆ. ಬ್ಯಾಕ್ಗ್ರೌಂಡ್ ಮ್ಯೂಸಿಕ್ನಲ್ಲಂತೂ ಸಾಧು ಎಕ್ಸ್ಪರ್ಟ್. ಹಲವು ಹೊಸಬರಿಗೆ ಚಾನ್ಸ್ ಕೊಟ್ಟು ಬೆಳೆಸಿರುವ ಹೆಮ್ಮೆಯೂ ಸಾಧು ಅವರಿಗೆ ಇದೆ.
ಹೀಗೆ ನಟನೆ, ಸಂಗೀತದ ಮೂಲಕ ಕನ್ನಡ ಚಿತ್ರರಂಗದಲ್ಲಿ ಗುರುತಿಸಿಕೊಂಡಿರುವ ಸಾಧು, ಈಗ ಇನ್ನೊಂದು ಪ್ರತಿಭೆಯನ್ನು ಚಿತ್ರರಂಗಕ್ಕೆ ಪರಿಚಯಿಸುತ್ತಿದ್ದಾರೆ. ಆತ ಬೇರ್ಯಾರೂ ಅಲ್ಲ. ಅವರ ಪುತ್ರ ಸುರಾಗ್.
ಮಹೇಶ್ ಬಾಬು ನಿರ್ದೇಶನದ ಅತಿರಥ ಚಿತ್ರದ ಮೂಲಕ ಸುರಾಗ್ ಸಂಗೀತ ನಿರ್ದೇಶಕರಾಗುತ್ತಿದ್ದಾರೆ. ವೆಸ್ಟ್ರನ್, ಕ್ಲಾಸಿಕ್ ಮ್ಯೂಸಿಕ್ ಎರಡನ್ನೂ ಕಲಿತಿರುವ ಸುರಾಗ್, ತಂದೆಯ ಗರಡಿಯಲ್ಲೂ ಪಳಗಿದ್ದಾರೆ. ಕಿರಗೂರಿನ ಗಯ್ಯಾಳಿಗಳು, ಗೋಲಿಸೋಡ ಸೇರಿದಂತೆ ಹಲವಾರು ಚಿತ್ರಗಳಿಗೆ ಹಿನ್ನೆಲೆ ಸಂಗೀತವನ್ನು ಪ್ರೋಗ್ರಾಮಿಂಗ್ ಮಾಡಿದ ಅನುಭವೂ ಇದೆ.
ಎಲ್ಲ ನಿರೀಕ್ಷೆಯಂತೆಯೇ ನಡೆದು ಹೋಗಿದ್ದರೆ, ಗಡಿಯಾರ ಚಿತ್ರಕ್ಕೇ ಸಂಗೀತ ನಿರ್ದೇಶಕರಾಗಬೇಕಿತ್ತು ಸುರಾಗ್. ಏನೇನೋ ಕಾರಣಗಳಿಂದ ಚಿತ್ರ ಅರ್ಧಕ್ಕೆ ನಿಂತು ಹೋಗಿ, ಈಗ ಅತಿರಥದ ಮೂಲಕ ಸಂಗೀತ ನಿರ್ದೇಶನದ ಲೋಕಕ್ಕೆ ಕಾಲಿಡುತ್ತಿದ್ದಾರೆ ಸುರಾಗ್. ಶುಭವಾಗಲಿ.