ಕಿಚ್ಚ ಸುದೀಪ್ `ಪೈಲ್ವಾನ'ರಾಗುತ್ತಿದ್ದಾರೆ. ಅದೂ ಅಂತಿಂಥ ಪೈಲ್ವಾನ ಅಲ್ಲ. ಗರಡಿ ಮನೆಯ ಕಟ್ಟಾಳು. ಚಿತ್ರದ ಫಸ್ಟ್‍ಲುಕ್ ಹೊರಬಿದ್ದಿದೆ. ಗರಡಿ ಮನೆಯ ಮಣ್ಣು ಮೆತ್ತಿಕೊಂಡಿರುವ ಹುರಿಗಟ್ಟಿದ ದೇಹದ ಸುದೀಪ್‍ರನ್ನು ನೋಡಿದವರು ವ್ಹಾವ್ ಎಂದಿದ್ದಾರೆ.
ಪೈಲ್ವಾನ ಚಿತ್ರದ ಸಂಪೂರ್ಣ ಕಥೆಯೇ ಪೈಲ್ವಾನನ ಕ್ರೀಡೆಯ ಕಥೆ. ದಾವಣಗೆರೆ, ವಿಜಯಪುರ, ಬಾಗಲಕೋಟೆಗಳಲ್ಲಿ ಚಿತ್ರದ ಶೂಟಿಂಗ್ ನಡೆಯಲಿದೆ. ಮೊದಲ ಚಿತ್ರದಲ್ಲಿ ಯೋಧನೊಬ್ಬನ ಕಥೆ ಹೇಳಿದ್ದ ಕೃಷ್ಣ, ಎರಡನೇ ಚಿತ್ರದಲ್ಲಿ ಪೈಲ್ವಾನನ ಕಥೆ ಆರಿಸಿಕೊಂಡಿದ್ದಾರೆ. ಜೀವನ ಪ್ರತಿಯೊಬ್ಬರಿಗೂ ಎರಡನೇ ಅವಕಾಶ ಕೊಡುತ್ತೆ. ಹಾಗೆ ತನಗೆ ಸಿಕ್ಕ ಸೆಕೆಂಡ್ ಚಾನ್ಸ್‍ನ್ನು ದಕ್ಕಿಸಿಕೊಳ್ಳಲು ನಾಯಕ ಏನೇನೆಲ್ಲ ಮಾಡಿ ಯಶಸ್ವಿಯಾಗುತ್ತಾನೆ ಎನ್ನುವುದೇ ಚಿತ್ರದ ಕಥೆ ಎಂದು ಗುಟ್ಟು ಬಿಟ್ಟಿದ್ದಾರೆ ಕೃಷ್ಣ.
ಕನ್ನಡ ಸಿನಿಮಾಗಳಲ್ಲಿ ಗರಡಿ ಮನೆಗಳು ಅಪರೂಪವೇನಲ್ಲ. ಆದರೆ, ಗರಡಿ ಮನೆಯ ಪೈಲ್ವಾನನ ಕಥೆಯೇ ಸಿನಿಮಾ ಆಗಿಲ್ಲ. ಹೀಗಾಗಿಯೇ ಪೈಲ್ವಾನ ಸುದೀಪ್ ಹೇಗಿರ್ತಾರೋ ನೋಡಬೇಕು ಎಂಬ ಅಭಿಮಾನಿಗಳ ತುಡಿತ ಜೋರಾಗಿದೆ.