ಈ ಮಾತನ್ನು ಬೇರೆ ಯಾರಾದರೂ ಹೇಳಿದ್ದರೆ ಒಪ್ಪಿಕೊಳ್ಳಬಹುದಿತ್ತೇನೋ..ಆದರೆ, ಹೀಗಂತ ಹೇಳಿರೋದು ಯೋಗರಾಜ್ ಭಟ್. ಮಣಿ, ಮುಂಗಾರುಮಳೆಯಿಂದ, ಈಗಿನ ಮುಗುಳುನಗೆಯವರೆಗೆ ಅವರು ಹೇಳಿದ್ದೆಲ್ಲ ಪ್ರೇಮಕಥೆಗಳೇ. ಆದರೆ, ಪ್ರೇಮಕಥೆ ಹೇಳೋದು ಬಲು ದೊಡ್ಡ ರಿಸ್ಕು ಅಂತಾರೆ ಯೋಗರಾಜ್ ಭಟ್.
ಏಕೆ ಅಂತಾ ಕೇಳಿದ್ರೆ, ``ಏನ್ಮಾಡೋದು..ಸಿನಿಮಾ ನೋಡುವ ಯುವಕರಿಗೂ, ಯುವತಿಯರಿಂದ ಹಿಡಿದು 80ರ ಮುದುಕರವರೆಗೆ ಅದು ಟಚ್ ಆಗಬೇಕು. ಹಾಗೆ ಪ್ರೇಮಕಥೆ ರೂಪಿಸೋದು ಮತ್ತು ಅದನ್ನು ಆಕರ್ಷಕವಾಗಿ ಹೇಳೋದು ಸುಲಭವಲ್ಲ'' ಅಂತಾರೆ.
ಮುಗುಳುನಗೆಯಲ್ಲಿ ಈಗಿನ ಯುವಜನಾಂಗದವರ ಪ್ರೇಮಕಥೆಯಿದೆಯಂತೆ. ಪ್ರತಿದಿನ ಕ್ರೈಂ ಮಾಡಬಹುದು, ಕಾಮಿಸಲೂ ಬಹುದು. ಆದರೆ, ಪ್ರತಿದಿನ ಪ್ರೇಮ ಸಾಧ್ಯವಿಲ್ಲ ಎಂದು ಪ್ರೇಮವನ್ನೇ ಸಾಕ್ಷಾತ್ಕರಿಸಿಕೊಂಡ ಬುದ್ದನಂತೆ ಹೇಳುವುದು ಭಟ್ಟರಿಗೆ ಮಾತ್ರ ಸಾಧ್ಯವೇನೋ..
ಚಿತ್ರದಲ್ಲಿ ಹಲವು ಕಥೆಗಳಿವೆ. ಅವೆಲ್ಲ ಕಥೆಗಳಿಗೆ ನಿಷ್ಕಲ್ಮಶವಾಗಿ ನಗುವ ಮುಖ ಬೇಕಿತ್ತು. ಅಂಥಾದ್ದೊಂಗು ನಗು ಗಣೇಶ್‍ಗಿದೆ.ಹಾಗಾಗಿಯೇ ಅವರನ್ನೇ ನಾಯಕರನ್ನಾಗಿ ಆಯ್ಕೆ ಮಾಡಿದೆವು ಅನ್ನೋದು ಭಟ್ಟರ ವ್ಯಾಖ್ಯಾನ. ಏಕೆಂದರೆ, ಗಣೇಶ್ ಅವರದ್ದು ಚಿತ್ರದುದ್ದಕ್ಕೂ ನಗುವ ಪಾತ್ರ. ಅಳುವುದು ಒಮ್ಮೆ ಮಾತ್ರ. ಹುಟ್ಟಿದಾಗಿನಿಂದ ಒಮ್ಮೆಯೂ ಕಣ್ಣಿರು ಹಾಕದ ಗಣೇಶ್, ಕಣ್ಣೀರು ಹಾಕೋದ್ಯಾಕೆ ಅನ್ನೋದಕ್ಕೆ ಉತ್ತರ ತಿಳಿದುಕೊಳ್ಳಬೇಕೆಂದರೆ, ಮುಗುಳುನಗೆ ನೋಡಲೇಬೇಕು.