ಇತ್ತೀಚೆಗಷ್ಟೇ ಉಪೇಂದ್ರ ಅವರ ಅಣ್ಣನ ಮಗ, ಪ್ರಿಯಾಂಕಾ ಉಪೇಂದ್ರ ಅವರ ಜೊತೆ ಸಿನಿಮಾದಲ್ಲಿ ನಟಿಸುತ್ತಿರುವುದು ಸುದ್ದಿಯಾಗಿತ್ತು. ಈಗ ಉಪೇಂದ್ರ ದಂಪತಿಯ ಪುಟ್ಟ ಮಗಳ ಸರದಿ. ಉಪೇಂದ್ರ ಅವರ ಮಗಳು ಐಶ್ವರ್ಯಾ ಸಿನಿಮಾದಲ್ಲಿ ಬಣ್ಣ ಹಚ್ಚಲು ಸಿದ್ಧವಾಗಿದ್ದಾಳೆ. ಅದೂ, ತಾಯಿ ಪ್ರಿಯಾಂಕಾ ಅವರ ಜೊತೆಯಲ್ಲೇ.
ಪ್ರಿಯಾಂಕಾ ಉಪೇಂದ್ರ, ಹೌರಾ ಬ್ರಿಡ್ಜ್ ಹೆಸರಿನ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಚಿತ್ರದ ನಿರ್ದೇಶಕ ಲೋಹಿತ್. ಮಮ್ಮಿ ಚಿತ್ರದ ಭರ್ಜರಿ ಸುದ್ದಿ ಮಾಡಿದ್ದ ಲೋಹಿತ್, ಈಗ ಹೌರಾ ಬ್ರಿಡ್ಜ್ ಹೆಸರಿನಲ್ಲಿ ಸಿನಿಮಾ ಮಾಡಲು ಸಿದ್ಧರಾಗಿದ್ದಾರೆ.
ಹಾಗೆ ನೋಡಿದ್ರೆ, ಐಶ್ವರ್ಯಾ, ಮಮ್ಮಿ ಚಿತ್ರದಲ್ಲೇ ಬಣ್ಣ ಹಚ್ಚಬೇಕಿತ್ತು. ಆದರೆ, ಇನ್ನೂ ಚಿಕ್ಕ ಹುಡುಗಿ ಎಂಬ ಕಾರಣಕ್ಕೆ ಪ್ರಿಯಾಂಕಾ ಅವರೇ ಬೇಡ ಎಂದಿದ್ದರಂತೆ. ಈಗ ಮತ್ತೊಮ್ಮೆ ಹೌರಾ ಬ್ರಿಡ್ಜ್ ಚಿತ್ರ ಶುರು ಮಾಡಿದಾಗ, ಇನ್ನೊಮ್ಮೆ ನಿರ್ದೇಶಕರು ಐಶ್ವರ್ಯಾಗೆ ಒಂದು ರೋಲ್ ನೀಡುವ ಪ್ರಸ್ತಾಪ ಮುಂದಿಟ್ಟರಂತೆ. ಈ ಬಾರಿ ಇಲ್ಲ ಎನ್ನಲು ಸಾಧ್ಯವಾಗಿಲ್ಲ.
ಅಲ್ಲದೆ, ಚಿತ್ರದ ಬಹುಪಾಲು ಚಿತ್ರೀಕರಣ ನಡೆಯುವುದು ಕೊಲ್ಕೊತ್ತಾದಲ್ಲಿ. ಅದು ಪ್ರಿಯಾಂಕಾ ಅವರ ತವರು ಮನೆಯೂ ಹೌದು. ಅಲ್ಲಿ ಮಗಳನ್ನು ನೋಡಿಕೊಳ್ಳಲು ತಾಯಿಯ ನೆರವೂ ಸಿಗುತ್ತೆ. ಹೀಗಾಗಿ ಒಪ್ಪಿಕೊಂಡೆ ಎಂದಿದ್ದಾರೆ ಪ್ರಿಯಾಂಕಾ.