ನಿಮ್ಮ ನಿಮ್ಮ ಮನವ ಸಂತೈಸಿಕೊಳ್ಳಿ ಎಂದು ದಾಸರು ಹೇಳಿದರೆ, ನಿಮ್ಮ ನಿಮ್ಮ ಪ್ರೀತಿಯನ್ನ ನೀವೇ ಹುಡುಕಿಕೊಳ್ಳಿ ಎನ್ನುತ್ತಿದ್ದಾರೆ ಭಟ್ಟರು. ಪ್ರೀತಿಯ ಆಧ್ಯಾತ್ಮ ಹೇಳ್ತಾ ಇರೋವ್ರು ಯೋಗರಾಜ ಭಟ್ಟರು.
ಚಿತ್ರದಲ್ಲಿ ನಾಯಕ ಪುಲಿಕೇಶಿ ಬಾಳಲ್ಲಿ ಬಂದು ಹೋಗುವ ಪ್ರೀತಿಯ ಕಥೆಗಳೇ ಮುಗುಳುನಗೆ ಸಿನಿಮಾ. ನಗುವುದನ್ನೇ ಜೀವನ ಧರ್ಮವನ್ನಾಗಿಸಿಕೊಂಡಿರುವ ನಾಯಕ ಮತ್ತು ಆತನ ಬದುಕಿನಲ್ಲಿ ಬಂದು ಹೋಗುವ ಪ್ರೇಮಿಗಳೇ ಚಿತ್ರದ ಪಾತ್ರಧಾರಿಗಳು.
ಚಿತ್ರದಲ್ಲಿ ನಾಲ್ವರು ನಾಯಕಿಯರು. ಅಶಿಕಾ ರಂಗನಾಥ್, ಗಣೇಶ್ ಟೀನೇಜ್ ಲೈಫಲ್ಲಿ ಬಂದು ಹೋಗುವ ಹುಡುಗಿ. ಪ್ರೀತಿಯೋ..ಆಕರ್ಷಣೆಯೋ.. ಗೊತ್ತಾಗದ ವಯಸ್ಸಿನಲ್ಲಿ ಮೊಳಕೆಯೋ..ಮೊಗ್ಗೋ ಆಗಿ ಮರೆತುಹೋಗುವ ಪ್ರೇಮ.
ಇನ್ನೊಬ್ಬ ನಾಯಕಿ ನಿಖಿತಾ ನಾರಾಯಣನ್. ಸ್ವಾತಂತ್ರ್ಯ ಮತ್ತು ಕೆರಿಯರ್‍ನ್ನೇ ಆರಾಧಿಸುವ ಮಾಡರ್ನ್ ಹುಡುಗಿ. ಆಕೆ ಗಿಟಾರ್ ವಾದಕಿಯೂ ಹೌದು. ಮೂರನೇ ನಾಯಕಿ ಅಪೂರ್ವ ಅರೋರಾ. ಪಕ್ಕಾ ಸಂಪ್ರದಾಯಸ್ಥ ಮನೆತನದ ಹುಡುಗಿ. ಮೌಲ್ಯಗಳನ್ನೇ ಜೀವನ ಎಂದು ನಂಬಿದವಳು.
ಇನ್ನು ಕಡೆಯದಾಗಿ ಬರುವುದು ಅಮೂಲ್ಯ. ಆಕೆಯದ್ದು ಚಿತ್ರದಲ್ಲಿ ಅತಿಥಿ ಪಾತ್ರ. ನಾಯಕನಿಗೆ ಮಾರ್ಗದರ್ಶನ ನೀಡುವ ಹುಡುಗಿ.
ಇಷ್ಟೂ ನಾಯಕಿಯರ ಮಧ್ಯೆ ಇರುವ ಏಕೈಕ ಕೊಂಡಿ ಪುಲಿಕೇಶಿ ಗಣೇಶ್ ಮತ್ತು ಮುಗುಳುನಗೆ. ಇದು ಮುಂಗಾರು ಮಳೆ ಮತ್ತು ಗಾಳಿಪಟದ ನಂತರ ಗಣೇಶ್ ಮತ್ತು ಯೋಗರಾಜ್ ಭಟ್ಟರು ಒಟ್ಟಾಗಿರುವ ಸಿನಿಮಾ. ನಿರೀಕ್ಷೆ ಭರ್ಜರಿಯಾಗಿದೆ. ಹಾಡು ಹಿಟ್ಟಾಗಿದೆ. ಸಿನಿಮಾ ರೆಡಿಯಾಗಿದೆ. ರಿಲೀಸ್ ಡೇಟ್ ಅನೌನ್ಸಾಗಿದೆ. ಪ್ರೇಕ್ಷಕ ಕಾದು ಕುಳಿತಿದ್ದಾಗಿದೆ. ಈ ವಾರ ತಡ್ಕೊಂಡ್‍ಬಿಡಿ.