ಮೆಗಾಸ್ಟಾರ್ ಚಿರಂಜೀವಿ ಅಭಿನಯದ "ಉಯ್ಯಾಲವಾಡ ನರಸಿಂಹ ರೆಡ್ಡಿ' ಚಿತ್ರದಲ್ಲಿ ಸುದೀಪ್ ನಟಿಸುತ್ತಾರೆ ಎಂಬ ಸುದ್ದಿ ಕೇಳಿ ಬರ್ತಾನೇ ಇತ್ತು. ಡೇಟ್ ಕ್ಲಾಶ್ ಆಗಬಹುದು ಎಂಬ ಕಾರಣಕ್ಕೆ ಸುದೀಪ್ ನಟಿಸುವ ಬಗ್ಗೆ ಅನುಮಾನವೂ ಇತ್ತು. ಈಗ ಯಾವ ಸಂಶಯವೂ ಇಲ್ಲ. ಸುದ್ದಿ ಪಕ್ಕಾ ಆಗಿದೆ.
ಆ ಚಿತ್ರದ ಹೆಸರು ಈಗ "ಉಯ್ಯಾಲವಾಡ ನರಸಿಂಹ ರೆಡ್ಡಿ ಅಲ್ಲ. ಸೈಯರಾ ನರಸಿಂಹ ರೆಡ್ಡಿ. ಚಿತ್ರವನ್ನು ಚಿರಂಜೀವಿ ಪುತ್ರ ರಾಮಚರಣ್ ತೇಜ ಅವರೇ ನಿರ್ಮಿಸುತ್ತಿದ್ದಾರೆ. ಸುರೇಂದ್ರ ರೆಡ್ಡಿ ನಿರ್ದೇಶಕ. ಚಿರಂಜೀವಿ ಹುಟ್ಟುಹಬ್ಬ ಮೆಗಾ ಬರ್ತ್ ಡೇ ಸ್ಪೆಷಲ್ ಆಗಿ ಚಿತ್ರದ ಮೋಷನ್ ಪೋಸ್ಟರ್ ಬಿಡುಗಡೆಯಾಗಿದೆ.
ಸೈಯರಾ ನರಸಿಂಹ ರೆಡ್ಡಿ ಚಿತ್ರದಲ್ಲಿ ಬಾಲಿವುಡ್, ಟಾಲಿವುಡ್, ಸ್ಯಾಂಡಲ್ವುಡ್, ಕಾಲಿವುಡ್ನ ಕಲಾವಿದರ ದೊಡ್ಡ ದಂಡೇ ಇದೆ. ಚಿರಂಜೀವಿ ಜೊತೆಗೆ ಅಮಿತಾಭ್ ಬಚ್ಚನ್, ಸುದೀಪ್, ಜಗಪತಿ ಬಾಬು, ವಿಜಯ್ ಸೇತುಪತಿ, ನಾಸರ್, ರವಿ ಕಿಶನ್, ಸುಬ್ಬರಾಜು ಮುಂತಾದವರು ನಟಿಸಲಿದ್ದಾರೆ. ನಾಯಕಿಯಾಗಿ ನಯನತಾರಾ ಇರುತ್ತಾರೆ. ಎಷ್ಟೋ ವರ್ಷಗಳ ನಂತರ ಎ.ಆರ್. ರೆಹಮಾನ್ ತೆಲುಗು ಚಿತ್ರಕ್ಕೆ ಸಂಗೀತ ನೀಡುತ್ತಿರುವುದು ವಿಶೇಷ.
ಉಯ್ಯಾಲವಾಡ ನರಸಿಂಹ ರೆಡ್ಡಿ, ಆಂಧ್ರಪ್ರದೇಶಕ್ಕಷ್ಟೇ ಅಲ್ಲ, ಇಡೀ ಭಾರತಕ್ಕೇ ದೊಡ್ಡ ಹೆಸರು. 1857ರಲ್ಲಿ ಭಾರತದ ಸ್ವಾತಂತ್ರ್ಯ ಸಂಗ್ರಾಮ ಶುರುವಾಗುವ ಮುನ್ನವೇ ಬ್ರಿಟಿಷರ ವಿರುದ್ಧ ಬಂಡಾಯವೆದ್ದು ಮಣಿಸಿದ್ದ ಧೀರ. ಉಯ್ಯಾಲವಾಡ ನರಸಿಂಹ ರೆಡ್ಡಿಯನ್ನು ಭಾರತದ ಮೊದಲ ಸ್ವಾತಂತ್ರ್ಯ ಹೋರಾಟಗಾರ ಎಂದೇ ಗುರುತಿಸಲಾಗುತ್ತೆ. ಆತನನ್ನು 1847ರಲ್ಲಿ ಬ್ರಿಟಿಷರು ಗಲ್ಲಿಗೇರಿಸಿದ್ದರು. ಅಂಥಾದ್ದೊಂದು ಐತಿಹಾಸಿಕ ಚಿತ್ರದಲ್ಲಿ ಸುದೀಪ್ ನಟಿಸಲಿದ್ದಾರೆ. ಪಾತ್ರ ಯಾವುದು ಎನ್ನುವುದು ಇನ್ನೂ ಗೊತ್ತಾಗಿಲ್ಲ.