ವಿಷ್ಣುವರ್ಧನ್ ಅಭಿಮಾನಿಗಳು ದೊಡ್ಡ ಮಟ್ಟದಲ್ಲಿ ವಿಷ್ಣುವರ್ಧನ್ ರಾಷ್ಟ್ರೀಯ ಉತ್ಸವ ನಡೆಸುತ್ತಿದ್ದಾರೆ.
ಆಗಸ್ಟ್ 27 ರಂದು ದೆಹಲಿಯಲ್ಲಿ 'ಡಾ.ವಿಷ್ಣುವರ್ಧನ್ ರಾಷ್ಟ್ರೀಯ ಉತ್ಸವಕ್ಕೆ ಸಕಲ ಸಿದ್ಧತೆಗಳೂ ನಡೆದಿವೆ. ಆ ಸಮಾರಂಭಕ್ಕೆ ವಿಷ್ಣು ಅಭಿಮಾನಿಗಳು, ರಾಜಕೀಯ ಗಣ್ಯರು, ಸಿನಿಮಾ ದಿಗ್ಗಜರು ಸಾಕ್ಷಿಯಾಗುತ್ತಿದ್ದಾರೆ. ವಿಷ್ಣು ಹೆಸರಲ್ಲಿ ನಡೆಯುತ್ತಿರುವ ಆ ಉತ್ಸವಕ್ಕೆ ವಿಡಿಯೋ ಮೂಲಕ ಶುಭಾಶಯ ಹೇಳಿರುವ ಸುದೀಪ್, ವಿಷ್ಣು ಅಭಿಮಾನಿಗಳನ್ನು ಕೊಂಡಾಡಿದ್ದಾರೆ. ಅಭಿಮಾನಿಗಳೆಂದರೆ, ನಿಮ್ಮ ಹಾಗಿರಬೇಕು ಎಂದು ಮೆಚ್ಚಿಕೊಂಡಿದ್ದಾರೆ.
ಸುದೀಪ್ ಪೂರ್ವನಿಗದಿತ ಕಾರ್ಯಕ್ರಮಗಳ ಪ್ರಕಾರ ಶೂಟಿಂಗ್ನಲ್ಲಿರುವ ಕಾರಣ ಕಾರ್ಯಕ್ರಮದಲ್ಲಿ ಭಾಗವಹಿಸಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ವಿಡಿಯೋ ಮೂಲಕ ಶುಭ ಕೋರಿರುವ ಕಿಚ್ಚ, ಒಬ್ಬ ನಟ ನಮ್ಮ ಜೊತೆ ಇಲ್ಲದಿರುವ ಸಂದರ್ಭಗಳಲ್ಲೂ ಅವರನ್ನು ಜೀವಂತವಾಗಿಡುವುದು ಅಭಿಮಾನಿಗಳಿಂದ ಮಾತ್ರ ಸಾಧ್ಯ. ಅಂಥಾದ್ದೊಂದು ಕೆಲಸ ಮಾಡುತ್ತಿರುವ ವಿಷ್ಣು ಅಭಿಮಾನಿಗಳಿಗೆ ನನ್ನ ನಮನ ಎಂದಿದ್ದಾರೆ.
ವಿಷ್ಣು ಸರ್ ನೆನಪಲ್ಲಿ, ಈ ಉತ್ಸವ ನಡೆಸುತ್ತಿರುವ ಅಭಿಮಾನಿಗಳಿಗೆ ನನ್ನ ಸಲ್ಯೂಟ್. ದೆಹಲಿಯಲ್ಲಿ ಈ ಉತ್ಸವ ನಡೆಯುತ್ತಿರುವುದು, ವಿಷ್ಣು ಸರ್ ಅವರ ಆರಡಿ ಎತ್ತರದ ಪ್ರತಿಮೆ ಉದ್ಘಾಟನೆ ಆಗುತ್ತಿರುವುದು, ದೆಹಲಿ ಬಾಗಿಲಿನಲ್ಲಿ ಮೆರವಣಿಗೆ ಮಾಡುತ್ತಿರುವುದು ತುಂಬಾ ಬಹಳ ಖುಷಿ ಆಗುತ್ತಿದೆ. ಎಲ್ಲದಕ್ಕಿಂತ ಹೆಚ್ಚಾಗಿ ಸುಮಾರು 500 ಜನ ಅಭಿಮಾನಿಗಳು ಬೆಂಗಳೂರಿನಿಂದ ದೆಹಲಿಗೆ ಹೋಗಿ ಭಾಗವಹಿಸುತ್ತಿರುವುದ ಸಂಭ್ರಮ ಹೆಚ್ಚಿಸಿದೆ ಎಂದಿದ್ಧಾರೆ ಸುದೀಪ್.
ಚಿತ್ರಲೋಕ ವೀರೇಶ್ಗೆ ಸುದೀಪ್ ಹಾರೈಕೆ
ಇದೇ ಕಾರ್ಯಕ್ರಮದಲ್ಲಿ ಚಿತ್ರಲೋಕ ವೀರೇಶ್ ಅವರು ವಿಷ್ಣುವರ್ಧನ್ ಅವರ ಭಾವಚಿತ್ರಗಳನ್ನ ಪ್ರದರ್ಶನ ಮಾಡುತ್ತಿರುವುದನ್ನು ಪ್ರಸ್ತಾಪಿಸಿರುವ ಸುದೀಪ್, ವೀರೇಶ್ ಅವರಿಗೆ ಅಭಿನಂದನೆ ಸಲ್ಲಿಸಿದ್ದಾರೆ.
ವಿಷ್ಣು ಸರ್ ಬಹಳ ದೊಡ್ಡ ಕಲಾವಿದರು. ಅದಕ್ಕಿಂತಲೂ ಹೆಚ್ಚಾಗಿ ಮಹಾನ್ ವ್ಯಕ್ತಿ. ಅವರ ಹೆಸರಲ್ಲಿ ಎಷ್ಟೇ ಕಾರ್ಯಕ್ರಮಗಳು ನಡೆದರೂ ಕೂಡ ಕಡಿಮೆಯೇ. ನನಗೆ ತುಂಬ ಸಂತೋಷವಿದೆ. ಯಾಕಂದ್ರೆ, ಜೀವನದಲ್ಲಿ ಕೆಲವು ಸಂದರ್ಭಗಳು ಅವರೊಂದಿಗೆ ಕಾಲಕಳೆಯುವ ಅವಕಾಶ ಸಿಕ್ಕಿತ್ತು. ಹತ್ತಿರದಲ್ಲಿ ಕೂತು ಮಾತನಾಡುವುದಕ್ಕೆ ಅವಕಾಶ ಸಿಕ್ಕಿತ್ತು. ನನಗೆ ಒಂದು ಪ್ರಶಸ್ತಿ ಎಂದಿದ್ದಾರೆ ಸುದೀಪ್.
ವಿಷ್ಣು ಸರ್ ಹೆಸರಲ್ಲಿ ಕಾರ್ಯಕ್ರಮಗಳನ್ನ ನಡೆಸಿ, ವಿಷ್ಣು ಸರ್ ಅವರನ್ನ ಜೀವಂತವಾಗಿ ಇಟ್ಟಿದ್ದೀರಿ ಅದು ಶಾಶ್ವತವಾಗಿರಲಿ. ನಿಮ್ಮಂತಹ ಅಭಿಮಾನಿಗಳನ್ನು ವಿಷ್ಣು ಸರ್ ಧನ್ಯರು ಎಂದಿದ್ದಾರೆ ಸುದೀಪ್.