‘‘ದಯವಿಟ್ಟು ಇದನ್ನು ಅಹಂಕಾರ ಎಂದು ಭಾವಿಸಬೇಡಿ. ನಿಮ್ಮ ಹಾರೈಕೆ, ಪ್ರೀತಿ, ಅಭಿಮಾನ ಇರಲಿ. ನನ್ನ ಪತಿಗೆ ಕಾಯಿಲೆಯಾಗಿರುವುದು ನಿಜ. ಚಿಕಿತ್ಸೆ ಕೊಡಿಸುತ್ತಿದ್ದೇವೆ. ಹಾಗೆಂದು ಹಣವಿಲ್ಲದೆ ಪರದಾಡುವ ಸ್ಥಿತಿಯಲ್ಲಿ ನಾವಿಲ್ಲ. ನೆರವಿಗೆ ಬಂಧುಗಳಿದ್ದಾರೆ. ಚಿತ್ರರಂಗದವರೂ ನೆರವು ನೀಡುತ್ತಿದ್ದಾರೆ. ನನ್ನ ಅಕೌಂಟ್ ನಂಬರ್ನ್ನು ಹೇಗೆ ಪಡೆದರೋ.. ಗೊತ್ತಿಲ್ಲ. ಆದರೆ ದಯವಿಟ್ಟು ಹಣ ನೀಡಬೇಡಿ. ನನ್ನ ಪತಿ ಗುಣಮುಖರಾಗಲು ಪ್ರಾರ್ಥಿಸಿ. ನಿನ್ನ ಪ್ರಾರ್ಥನೆಯ ಪ್ರತಿಫಲದಿಂದ ಅವರು ಗುಣಮುಖರಾಗಲಿ. ಇದು ನನ್ನ ಮನವಿ’’
ಈ ಮಾತು ಹೇಳಿರುವುದು ಸಂಗೀತ ನಿರ್ದೇಶಕ, ಗಾಯಕ ಎಲ್. ಎನ್. ಶಾಸ್ತ್ರಿ ಅವರ ಪತ್ನಿ ಸುಮಾ.
ಕೋಲುಮಂಡೆ ಜಂಗಮ ದೇವ.. ಹಾಡಿನ ಖ್ಯಾತಿಯ ಗಾಯಕ, ಸಂಗೀತ ನಿರ್ದೇಶಕ ಎಲ್.ಎನ್. ಶಾಸ್ತ್ರಿ ಅವರು ಕರುಳಿನ ಕ್ಯಾನ್ಸರ್ನಿಂದ ಬಳಲುತ್ತಿದ್ದಾರೆ. ಚಿಕಿತ್ಸೆ ಕೊಡಿಸೋಕೆ ಹಣವಿಲ್ಲದೆ ಪರದಾಡುತ್ತಿದ್ದಾರೆ. ದಯವಿಟ್ಟು ನೆರವು ನೀಡಿ ಎಂದು ಕೆಲವು ಮಾಧ್ಯಮಗಳಲ್ಲಿ ವರದಿಯಾಗಿತ್ತು. ನೂರಾರು ಅಭಿಮಾನಿಗಳು, ಚಿತ್ರರಂಗದ ಗಣ್ಯರು ನೆರವು ನೀಡುವುದಾಗಿ ಹೇಳಿದ್ದರು. ಈ ಹಿನ್ನೆಲೆಯಲ್ಲಿ ಫಿಲ್ಮ್ ಚೇಂಬರ್ ಅಧ್ಯಕ್ಷ ಸಾ.ರಾ. ಗೋವಿಂದು, ಎಲ್.ಎನ್. ಶಾಸ್ತ್ರಿ ಅವರ ಮನೆಗೆ ಭೇಟಿ ನೀಡಿ ಆರೋಗ್ಯ ವಿಚಾರಿಸಿದರು. ನೆರವು ಬೇಕೇ ಎಂದು ಕೇಳಿದಾಗ ಅವರ ಪತ್ನಿ ಸುಮಾ ಅಭಿಮಾನಿಗಳಿಗೆ ಈ ರೀತಿ ಮನವಿ ಮಾಡಿಕೊಂಡಿದ್ದಾರೆ.
ಎಲ್.ಎನ್. ಶಾಸ್ತ್ರಿ ಅವರಿಗೆ ಉತ್ತಮ ಚಿಕಿತ್ಸೆ ಕೊಡಿಸಲಾಗುತ್ತಿದೆ. ಅವರ ಬಂಧುಗಳೂ ಜೊತೆಗಿದ್ದಾರೆ. ಅವರು ಗುಣಮುಖರಾಗಲು ಪ್ರಾರ್ಥಿಸಿ. ನಿಮ್ಮ ಹಾರೈಕೆಯಿಂದ ಅವರು ಗುಣಮುಖರಾಗಲಿ. ಜನುಮದ ಜೋಡಿಯ ಕೋಗಿಲೆ ಮತ್ತೆ ಹಾಡಲಿ.