ನೆಗೆಟಿವ್ ಆಲೋಚನೆ ಬಿಟ್ಟು, ಪಾಸಿಟಿವ್ ಆಗಿ ಯೋಚಿಸಲು ತೊಡಗಿದರೆ ಏನಾಗಬಹುದು. ಉತ್ತರ : ದ್ವಾರಕೀಶ್
ತಮ್ಮಲ್ಲಿನ ನ್ಯೂನತೆಗಳನ್ನೇ ಶಕ್ತಿಯಾಗಿಸಿ ಗೆಲ್ಲುವುದು ಹೇಗೆ?. ಉತ್ತರ : ದ್ವಾರಕೀಶ್
ಎತ್ತರವಿಲ್ಲದ, ಕುಳ್ಳ ದೇಹವನ್ನೇ ತಮ್ಮ ಶಕ್ತಿಯನ್ನಾಗಿಸಿಕೊಂಡು ಕನ್ನಡದ ಕುಳ್ಳನಾಗಿ ಮೆರೆದ ದ್ವಾರಕೀಶ್ ಜೀವನ, ಆತ್ಮವಿಶ್ವಾಸದ ಕೊರತೆಯಿಂದ ನರಳುವವರಿಗೆ ಸ್ಫೂರ್ತಿಯ ಚಿಲುಮೆಯಾಗಬಲ್ಲದು. ಆ ಸ್ಫೂರ್ತಿಯ ಚಿಲುಮೆಗೀಗ 75 ವರ್ಷ.
ಬಂಗಲ್ ಶ್ಯಾಮರಾವ್ ದ್ವಾರಕಾನಾಥ್ ಎಂಬುದು ಅವರ ಮೂಲ ಹೆಸರು. ಅಪ್ಪ ಹೇಳಿದಂತೆ ಕೇಳಿಕೊಂಡು ಅಂಗಡಿ ನಡೆಸಿಕೊಂಡು ಇದ್ದಿದ್ದರೆ, ಮೈಸೂರಿನಲ್ಲಿ ಆಟೋ ಸ್ಪೇರ್ಸ್ ಮಾರುತ್ತಾ ಬದುಕಿಬಿಡುತ್ತಿದ್ದರೇನೋ. ಆದರೆ, ಸಿನಿಮಾ ನೋಡುವ, ಸಿನಿಮಾ ಸೇರುವ ಹಠ ಬೆನ್ನುಹತ್ತಿತ್ತು. ಮಾವ ಹುಣಸೂರು ಕೃಷ್ಣಮೂರ್ತಿ ಬೆನ್ನು ಹತ್ತಿದ ದ್ವಾರಕೀಶ್, ವೀರಸಂಕಲ್ಪ ಚಿತ್ರದಲ್ಲೊಂದು ಪುಟ್ಟ ಪಾತ್ರ ಗಿಟ್ಟಿಸಿದರು.
ಆ ಚಿತ್ರದಲ್ಲಿ ಅವರು ಎದುರಿಸಿದ ಮೊದಲ ಶಾಟ್, ಸಿಂಹಾಸನ ಹತ್ತುವ ದೃಶ್ಯ. ಅದೇನು ಅಮೃತ ಗಳಿಗೆಯೋ.. ದ್ವಾರಕೀಶ್ ಕನ್ನಡಿಗರ ಹೃದಯ ಸಿಂಹಾಸನದ ಮಹಾರಾಜನಾಗಿ ಮೆರೆದರು. ಅವರ ಜೀವನದಲ್ಲಿ ಏರುಪೇರುಗಳಾದವು ನಿಜ. ಆದರೆ ಕನ್ನಡಿಗರ ಹೃದಯ ಸಿಂಹಾಸನದಲ್ಲಿ ದ್ವಾರಕೀಶ್ ಸ್ಥಾನ ಅಲುಗಾಡಲಿಲ್ಲ.
ಹಾಸ್ಯ ನಟನಾದವನು ಹೀರೋ ಆಗಬಹುದು ಎಂಬುದನ್ನು ಸಾಧಿಸಿ ತೋರಿಸಿದ್ದೇ ದ್ವಾರಕೀಶ್. ಕನ್ನಡ ಚಿತ್ರಗಳನ್ನು ವಿದೇಶದಲ್ಲಿ ಚಿತ್ರೀಕರಿಸಿದ ಮೊದಲಿಗ ದ್ವಾರಕೀಶ್. ಲಂಡನ್ ಸ್ಟುಡಿಯೋಗಳಲ್ಲಿ ಚಿತ್ರದ ಸಾಂಗ್ ರೆಕಾರ್ಡಿಂಗ್ ಮಾಡಿಸಿದ ಧೀರ ದ್ವಾರಕೀಶ್.
ಕನ್ನಡದ ಹೆಮ್ಮೆಯ ನಿರ್ದೇಶಕ ಸಿದ್ದಲಿಂಗಯ್ಯ ನಿರ್ದೇಶಕರಾದದ್ದು ದ್ವಾರಕೀಶ್ ಚಿತ್ರದಿಂದ. ದ್ವಾರಕೀಶ್ ನಿರ್ಮಾಪಕರಾದಾಗ ಅವರಿಗೆ ವಯಸ್ಸಾದರೂ ಎಷ್ಟು..? ಕೇವಲ 23. ಈಗ ಅವರಿಗೆ 75. 52 ವರ್ಷ ನಿರ್ಮಾಪಕರಾಗಿದ್ದ ದ್ವಾರಕೀಶ್ ಸಂಸ್ಥೆಯ 50ನೇ ಚಿತ್ರವೇ ಚೌಕ.
ಚೌಕ ಚಿತ್ರ ದ್ವಾರಕೀಶ್ ಜೀವನಕ್ಕೆ ಸರಿಯಾಗಿ ಹೊಂದುವ ಹಾಗಿದೆ. ಜೀವನದ ನಾಲ್ಕೂ ಮಗ್ಗುಲುಗಳನ್ನು ಮುಟ್ಟಿ ಬಂದಿದ್ದಾರೆ ದ್ವಾರಕೀಶ್. ಅವಕಾಶಕ್ಕಾಗಿ ಅಲೆಮಾರಿಯಾಗಿದ್ದ ದ್ವಾರಕೀಶ್. ಚಿತ್ರರಂಗದ ಸಾಮ್ರಾಟನಾಗಿ ಮೆರೆದ ದ್ವಾರಕೀಶ್. ಎಲ್ಲವನ್ನೂ ಕಳೆದುಕೊಂಡು, ಏನೂ ಇಲ್ಲದಂತಾಗಿ ಹೋದ ದ್ವಾರಕೀಶ್. ಮತ್ತೆ ಎಲ್ಲವನ್ನೂ ಗಳಿಸಿ, ಬದುಕು ಕಟ್ಟಿಕೊಂಡ ದ್ವಾರಕೀಶ್. ಅದಕ್ಕೇ ಹೇಳಿದ್ದು, ದ್ವಾರಕೀಶ್ ಜೀವನವೆಂಬುದು, ಆತ್ಮವಿಶ್ವಾಸ ಇಲ್ಲದವರು ಓದಲೇಬೇಕಾದ ಲೈಫು. ಅದರಲ್ಲಿ ಸ್ಫೂರ್ತಿಯಿದೆ..ಛಲವಿದೆ. ಆಫ್ರಿಕಾದಲ್ಲಿ ಶೀಲ ಚಿತ್ರ ಮಾಡಿ ಮೈತುಂಬಾ ಸಾಲ ಮಾಡಿಕೊಂಡ ದ್ವಾರಕೀಶ್, ಮತ್ತೊಮ್ಮೆ ಜೀವನದಲ್ಲಿ ಗೆಲುವಿನ ನಗೆ ನಕ್ಕಿದ್ದು ಆಪ್ತಮಿತ್ರನಿಂದಲೇ.
ದ್ವಾರಕೀಶ್ ಜೀವನದ ಆಪ್ತಮಿತ್ರ ವಿಷ್ಣುವರ್ಧನ್. ಅದೇಕೋ.. ಏನೋ.. ಅವರಿಬ್ಬರ ಸ್ನೇಹ ಎಷ್ಟು ಗಾಢವಾಗಿತ್ತೋ.. ಅಷ್ಟೇ ನಿಗೂಢವಾಗಿ ದೂರವೂ ಆಗಿಹೋಯ್ತು. ಹೀಗೇಕಾಯ್ತು ಎನ್ನುವುದು ದ್ವಾರಕೀಶ್‍ಗೆ ಗೊತ್ತಿಲ್ಲ. ಏನಾಯ್ತು ಎನ್ನುವುದನ್ನು ವಿಷ್ಣುವರ್ಧನ್ ಹೇಳಿ ಹೋಗಲಿಲ್ಲ.
ಅವರ ಚಿತ್ರಗಳಲ್ಲಿ ರಾಜ್, ವಿಷ್ಣು, ಶಂಕರ್‍ನಾಗ್, ರಜಿನಿಕಾಂತ್, ಶ್ರೀನಾಥ್.. ನಾಯಕರಾಗಿದ್ದರು. ಕನ್ನಡ, ತಮಿಳು, ಹಿಂದಿ.. ಎಲ್ಲ ಭಾಷೆಗೂ ನುಗ್ಗಿದ್ದ ದ್ವಾರಕೀಶ್, ಕನ್ನಡ ಚಿತ್ರರಂಗದಲ್ಲಿ ಊರಿದ್ದು ವಾಮನ ಪಾದ. ಗೆಲುವು ಹತ್ತಿದರೆ, ಹಿಮಾಲಯಕ್ಕೆ ಕೊಂಡೊಯ್ಯುತ್ತೆ. ಸೋಲು ಸುತ್ತಿದರೆ ಪಾತಾಳಕ್ಕೆ ನೂಕಿಬಿಡುತ್ತೆ ಅಂತಾರಲ್ಲ..ಹಾಗೆ ಹಿಮಾಲಯ ಮತ್ತು ಪಾತಾಳ ಎರಡನ್ನೂ ಕಂಡು ಬಂದವರು ದ್ವಾರಕೀಶ್.
ದ್ವಾರಕೀಶ್ ಲೈಫನ್ನು ಹೇಳುತ್ತಾ ಹೋದರೆ, ಚಿತ್ರರಂಗದ ಇತಿಹಾಸವನ್ನೇ ಹೇಳಿದಂತೆ. ಆದರೆ, ದ್ವಾರಕೀಶ್ ಹಾಸ್ಯನಟನಾಗಿ, ನಿರ್ಮಾಪಕನಾಗಿ, ನಿರ್ದೇಶಕನಾಗಿ ಗೆದ್ದಿದ್ದು ಸಾಧನೆಯಲ್ಲ. ಅದಕ್ಕಿಂತ ಮಿಗಿಲಾದ ಸಾಧನೆ ಒಬ್ಬ ವ್ಯಕ್ತಿಯಾಗಿ ಸಾಧಿಸಿದ್ದು. ಅವರು ಗುರುತಿಸಿದ ಪ್ರತಿಭೆಗಳನ್ನು ಕನ್ನಡ ಚಿತ್ರರಂಗವನ್ನು ಆಳಿದವು.
ಸ್ಫೂರ್ತಿಯ ಕಥೆಗಳಿಗಾಗಿ ಅಮೆರಿಕ, ಬ್ರಿಟನ್, ಹಾಲಿವುಡ್, ಬಾಲಿವುಡ್.. ಹೀಗೆ ಎಲ್ಲೆಲ್ಲೋ ಅಲೆದು, ಅವರಿಗೇ ಗೊತ್ತಿಲ್ಲದ ವಿಶೇಷಣಗಳನ್ನೆಲ್ಲ ತುಂಬಿ, ಅವರನ್ನು ಹೀರೋಗಳಂತೆ ಬಿಂಬಿಸುವವರು ಒಂದ್ಸಲ ದ್ವಾರಕೀಶ್ ಜೀವನ ನೋಡಬೇಕು.