ಮಠ, ಎದ್ದೇಳು ಮಂಜುನಾಥ, ಡೈರೆಕ್ಟರ್ ಸ್ಪೆಷಲ್, ಎರಡನೇ ಸಲ.. ಮೊದಲಾದ ಚಿತ್ರಗಳನ್ನು ನಿರ್ದೇಶಿಸಿರುವ ಗುರುಪ್ರಸಾದ್, ಹರಿತ ಮಾತುಗಳಿಗೆ ಹೆಸರುವಾಸಿ. ಇಂತಹ ಗುರುಪ್ರಸಾದ್, ಉಪೇಂದ್ರ ಅವರ ಪ್ರಜಾಕೀಯದ ಬಗ್ಗೆ ಹಲವಾರು ಅನುಮಾನಗಳನ್ನೆತ್ತಿದ್ದಾರೆ. ಉಪೇಂದ್ರ ಅವರ ಎದುರು ನಾನಾ ಪ್ರಶ್ನೆಗಳನ್ನಿಟ್ಟಿದ್ದಾರೆ. ಉಪೇಂದ್ರ ಅವರ ಪ್ರಜಾಕೀಯ ಘೋಷಣೆಯೇ ಒಂದು ಗಿಮಿಕ್ ಎಂದಿದ್ದಾರೆ. ಅವರು ಎತ್ತಿರುವ ಪ್ರಶ್ನೆಗಳೇನು..? ಅವರ ಮಾತಲ್ಲೇ ಕೇಳಿ.
ಉಪೇಂದ್ರ ಮೊದಲಿನಿಂದಲೂ ಗಿಮಿಕ್ ಮಾಡಿಕೊಂಡೇ ಬಂದವರು. ಇದೂ ಏಕೆ ಗಿಮಿಕ್ ಆಗಿರಬಾರದು. ಅವರೀಗ 50ನೇ ಚಿತ್ರದ ಹತ್ತಿರ ಇದ್ದಾರೆ. ಆ ಚಿತ್ರಕ್ಕೆ ಪ್ರಮೋಷನ್ ತೆಗೆದುಕೊಳ್ಳಲು ಯಾಕೆ ಈ ರೀತಿಯ ಗಿಮಿಕ್ ಸೃಷ್ಟಿಸಿರಬಾರದು.
ನಾಳೆ ಇದೇ ಪ್ರಜಾಕೀಯದ ಹೆಸರಲ್ಲಿ ಪ್ರಚಾರ ಗಳಿಸಿ, ನಾಳೆ ಯಾವುದಾದರೂ ಪಕ್ಷಕ್ಕೆ ಸೇರುವುದಿಲ್ಲ ಎನ್ನುವುದಕ್ಕೆ ಏನು ಗ್ಯಾರಂಟಿ..? ಹಣವೇ ಇಲ್ಲದೆ ಪಕ್ಷ ಕಟ್ಟುವ ನಿಮ್ಮ ಕನಸಿನ ಹಿಂದೆ, ಹಣ ಮಾಡುವ ಹುನ್ನಾರ ಇದೆ ಎಂಬುದು ನನ್ನ ಅನುಮಾನ. ಆಗ ನಲವತ್ತೋ.. ಐವತ್ತೋ ಕೋಟಿ ತೆಗೆದುಕೊಂಡು ಬೇರೆ ಪಕ್ಷಕ್ಕೆ ಸೇರೋದಿಲ್ಲ ಎಂದು ಪ್ರಮಾಣ ಮಾಡುತ್ತೀರಾ..? ಆಗ ನಿಮ್ಮನ್ನು ನಂಬುತ್ತೇನೆ.
ನೀವು ಇದುವರೆಗೆ ಹಲವು ಸಿನಿಮಾಗಳಲ್ಲಿ ನಟಿಸಿದ್ದೀರಿ, ನಿರ್ದೇಶಿಸಿದ್ದೀರಿ. ಈ ಯಾವ ಚಿತ್ರಗಳಲ್ಲೂ ಪರೋಕ್ಷವಾಗಿಯಾಗಲೀ, ಪ್ರತ್ಯಕ್ಷವಾಗಿಯಾಗಲೀ.. ಬ್ಲಾಕ್ ಮನಿ ಬಳಸಿಯೇ ಇಲ್ಲವಾ..? ನಾನು ಬಳಸಿಲ್ಲ ಎಂದು ಭಗವದ್ಗೀತೆ ಮೇಲೆ ಪ್ರಮಾಣ ಮಾಡಿ ಹೇಳಿಬಿಡಿ. ನಾನು ನಿಮ್ಮನ್ನು ಮೋದಿಗಿಂತ ಹೆಚ್ಚಾಗಿ ಗೌರವಿಸುತ್ತೇನೆ.
ಉಪೇಂದ್ರ ಮೊದಲಿನಿಂದ ನೆಗೆಟಿವ್ ಪಾತ್ರಗಳ ಮೂಲಕವೇ ಖ್ಯಾತಿ ಗಳಿಸಿದವರು. ಈಗ ಅವರಿಗೆ ಆ ಇಮೇಜ್‍ನಿಂದ ಹೊರಬರಬೇಕಾಗಿದೆ. ಹೀಗಾಗಿ ಅವರು ತಮ್ಮ ಇಮೇಜ್‍ನ್ನು ಬದಲಾಯಿಸಿಕೊಳ್ಳಲು ಈ ರೀತಿಯ ಗಿಮಿಕ್ ಮಾಡಿದ್ದಾರೆ.
ಹೀಗೆ ಹಲವು ಪ್ರಶ್ನೆಗಳನ್ನು ಎತ್ತಿದ್ದಾರೆ ಗುರುಪ್ರಸಾದ್. ಉಪೇಂದ್ರ ಅವರ ಐಡಿಯಾ ಕೇಳಿದವರು, ಇಷ್ಟೊಂದು ಪ್ರಾಮಾಣಿಕತೆ ಇದ್ದರೆ ಇದು ವರ್ಕೌಟ್ ಆಗಲ್ಲ ಎಂದಿದ್ದರು. ಈಗ ಆ ಪ್ರಾಮಾಣಿಕತೆಯನ್ನೇ ಪ್ರಶ್ನಿಸಿದ್ದಾರೆ ಗುರುಪ್ರಸಾದ್.
ಇಷ್ಟೆಲ್ಲ ಹೇಳಿದ ನಂತರ ಗುರುಪ್ರಸಾದ್ ಇನ್ನೊಂದು ಮಾತನ್ನೂ ಸೇರಿಸುತ್ತಾರೆ. ನಾನೂ ಉಪೇಂದ್ರ ಅವರ ಅಭಿಮಾನಿ. ಅವರ ಚಿತ್ರಗಳನ್ನು ನೋಡಿ ಬೆಳೆದವನು. ಈಗ ನಾನು ಎತ್ತಿರುವ ಪ್ರಶ್ನೆಗಳಿಗೆ ಅವರು ಉತ್ತರಿಸಬೇಕು. ಹೀಗೆ ಏಕಾಏಕಿ ನಾನು ರಾಜಕೀಯಕ್ಕೆ ಬರುತ್ತೇನೆ ಎಂದಾಗ ನನಗೂ ಹಲವು ಪ್ರಶ್ನೆಗಳು ಹುಟ್ಟುತ್ತವೆ. ಪ್ರಶ್ನೆ ಕೇಳುವುದು ನನ್ನ ಹಕ್ಕು ಕೇಳಿದ್ದೇನೆ. ಅನ್ಯಥಾ ಭಾವಿಸಬೇಡಿ ಎಂದಿದ್ದಾರೆ ಗುರು.