` ರಾಜಕೀಯಕ್ಕೆ ಬಂದರೆ, ನಿಜದಂತಿರುವಾ ಸುಳ್ಳಲ್ಲ.. ಸುಳ್ಳುಗಳೆಲ್ಲ ನಿಜವಲ್ಲ ಎನ್ನಲು ಸಾಧ್ಯವಿಲ್ಲ..!  - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
upendra in politics
Upendra Images

‘‘A ಸ್ಟಾರ್ ಈಸ್ ಬಾರ್ನ್​’’. ಉಪೇಂದ್ರ ಅವರ A ಸಿನಿಮಾ ರಿಲೀಸ್ ಆದಾಗ ಚಿತ್ರಪ್ರಭದಲ್ಲಿ ಅಂಥಾದ್ದೊಂದು ಶೀರ್ಷಿಕೆ ನೀಡಲಾಗಿತ್ತು.

a_launch_upendra_kashinath.jpgಆ ಲೇಖನ ಬರೆದಿದ್ದವರು ಹಿರಿಯ ಪತ್ರಕರ್ತ ಉದಯ ಮರಕಿಣಿ. ಆಗ ಹಲವರು ಅದನ್ನು ಉತ್ಪ್ರೇಕ್ಷೆ ಎಂದಿದ್ದರು. ಅತಿರಂಜಿತ ಎಂದಿದ್ದರು. ಆದರೆ, ಆ ಭವಿಷ್ಯ ಸುಳ್ಳಾಗಲಿಲ್ಲ. ಉಪೇಂದ್ರ ಎಂಬ ನಟ ಸ್ಟಾರ್ ಆಗಿಯೇಬಿಟ್ಟರು. ಅಭಿಮಾನಿಗಳು ಪ್ರೀತಿಯಿಂದ ರಿಯಲ್ ಸ್ಟಾರ್ ಎಂದು ಕರೆದರು.

ಉಪೇಂದ್ರ ಅವರಷ್ಟೇ ಅಲ್ಲ, ಅವರ ಐಡಿಯಾಗಳೂ ವಿಚಿತ್ರವೇ. ಸಿನಿಮಾದಲ್ಲೂ ಅಷ್ಟೆ.. ಚಿತ್ರರಂಗದಲ್ಲೂ ಅಷ್ಟೆ. ಒಂದು ಕಥೆಯೊಳಗೆ ಹತ್ತಾರು ಕಥೆಗಳನ್ನು ಸೇರಿಸಿ, ಗೊಂದಲ ಸೃಷ್ಟಿಸುತ್ತಲೇ ಕಥೆ ಹೇಳುವ ಶೈಲಿಯನ್ನು ಪರಿಚಯಿಸಿದ್ದೇ ಉಪೇಂದ್ರ. ಕೆಲವರು ಅದನ್ನು ನಕಲು ಮಾಡುವ ಯತ್ನ ಮಾಡಿ ನಗೆಪಾಟಲಿಗೀಡಾದರು. ಒಂದೇ ಸಿನಿಮಾದಲ್ಲಿ ಹತ್ತಾರು ಫ್ಲ್ಯಾಶ್​ಬ್ಯಾಕ್​ಗಳನ್ನು, ಫ್ಲ್ಯಾಶ್​ಬ್ಯಾಕುಗಳ ಒಳಗೆ ಫ್ಲ್ಯಾಶ್​ಬ್ಯಾಕುಗಳನ್ನು ತೋರಿಸಿ ಗೆದ್ದಿದ್ದು ಉಪೇಂದ್ರ.

a_upendra.jpgA ಸಿನಿಮಾದಲ್ಲಂತೂ ಸಿನಿಮಾ ಶುರುವಾದ ಹತ್ತೇ ನಿಮಿಷದಲ್ಲಿ THE END ಎಂದು ಕಾಣಿಸಿದಾಗ ಪ್ರೇಕ್ಷಕ ಗೊಂದಲಕ್ಕೆ ಬಿದ್ದಿದ್ದ.  ಕಡ್ಡಾಯವಾಗಿ ಬುದ್ದಿವಂತರಿಗೆ ಮಾತ್ರ ಎಂದು ಟ್ಯಾಗ್​ಲೈನ್ ಕೊಟ್ಟು, ಬುದ್ದಿವಂತರಲ್ಲದವರನ್ನೂ ಚಿತ್ರಮಂದಿರಕ್ಕೆ ಸೆಳೆದಿದ್ದ ಉಪೇಂದ್ರ ತಂತ್ರಕ್ಕೆ ಚಿತ್ರರಂಗ ಬೆರಗಾಗಿತ್ತು.

ಹಾಗೆ ನೋಡಿದರೆ ನಟ ಉಪೇಂದ್ರಗಿಂತ ಪ್ರೇಕ್ಷಕರಿಗೆ ನಿರ್ದೇಶಕ ಉಪೇಂದ್ರ ಅವರೇ ಇಷ್ಟ. ಗುರು ಕಾಶೀನಾಥ್​ರ ಡಬಲ್ ಮೀನಿಂಗ್​ನ ಪರಾಕಾಷ್ಠೆ ತೋರಿಸಿದ್ದು ತರ್ಲೆ ನನ್ಮಗ ಉಪೇಂದ್ರ. ಅವರ 2ನೇ ಚಿತ್ರ ಶ್, ಇಂದಿಗೂ ಕನ್ನಡದ ಬೆಸ್ಟ್ ಹಾರರ್ ಮೂವಿಗಳಲ್ಲೊಂದು.

upendra_om1.jpgಓಂ ಚಿತ್ರ ಶಿವರಾಜ್​ ಕುಮಾರ್​ ಚಿತ್ರಜೀವನದಲ್ಲಷ್ಟೇ ಅಲ್ಲ, ಕನ್ನಡ ಚಿತ್ರರಂಗದಲ್ಲೇ ಸಾಹಸೀ ಪ್ರಯತ್ನ. A ಚಿತ್ರದಲ್ಲಿ ಕೂಡಾ ರಾಜಕೀಯದ ಎಳೆಯಿತ್ತಾದರೂ, ಪ್ರೇಮಕಥೆಯ ಮಧ್ಯೆ ಅದು ಅಷ್ಟಾಗಿ ಗಮನ ಸೆಳೆದಿರಲಿಲ್ಲ. ತಮ್ಮ ಹೆಸರನ್ನೇ ಚಿತ್ರದ ಟೈಟಲ್ ಆಗಿಸಿ, ತಾವೇ ನಿರ್ದೇಶಿಸಿ, ನಟಿಸಿ ಗೆದ್ದ ಇನ್ನೊಬ್ಬ ನಟ, ನಿರ್ದೇಶಕ ಭಾರತೀಯ ಚಿತ್ರರಂಗದಲ್ಲೇ ಇಲ್ಲ. 

ಅಂಥಾ ಉಪ್ಪಿ ಹೊಸ ‘ರಾಜಕೀಯ’ ಸಾಹಸಕ್ಕೆ ಕೈ ಹಾಕಿದ್ದಾರೆ. ಅದು ಅವರು ಇದುವರೆಗೆ ಸಕ್ರಿಯವಾಗಿ ತೊಡಗಿಕೊಳ್ಳದೇ ಇರುವ ಕ್ಷೇತ್ರ. ಸಿನಿಮಾಗಳಲ್ಲಿ ಸುಳ್ಳನ್ನು ಸುಳ್ಳು ಎಂದೇ ಹೇಳಿ ಜನರನ್ನು ಮೆಚ್ಚಿಸಬಹುದು. ರಾಜಕೀಯದಲ್ಲಿ ಹಾಗಲ್ಲ. ಅದಕ್ಕೆ ಉಲ್ಟಾ. ಅಲ್ಲಿ ಸುಳ್ಳನ್ನು ಸತ್ಯವೆಂದೇ ಸಾಧಿಸಬೇಕು. ಸಾಧಿಸಿ ಗೆಲ್ಲಬೇಕು.

operation_antha_launch.jpgಫಿಲ್ಟರ್ ಇಲ್ಲದೆ ಮಾತನಾಡುತ್ತೇನೆ ಎನ್ನುವ ಉಪ್ಪಿ, ರಾಜಕೀಯದಲ್ಲಿ ಅದೆಷ್ಟು ಫಿಲ್ಟರ್​ ಹಾಕಿಕೊಳ್ಳಬೇಕೋ..ಗೊತ್ತಿಲ್ಲ. ಸಿನಿಮಾದಲ್ಲಿ ಸತ್ಯವನ್ನೇ ತೋರಿಸಿದರೂ, ಚಿತ್ರದ ಪ್ರಾರಂಭದಲ್ಲಿ ‘ಈ ಚಿತ್ರದಲ್ಲಿನ ಕಥೆ, ಪಾತ್ರ, ಸನ್ನಿವೇಶ ಎಲ್ಲವೂ ಕಾಲ್ಪನಿಕ. ಯಾವುದೇ ಸತ್ಯ ಘಟನೆ, ವ್ಯಕ್ತಿಗೆ ಇದು ಹೋಲಿಕೆಯಾದಲ್ಲಿ ಅದು ಕೇವಲ ಕಾಕತಾಳೀಯ’’ ಎಂದು ತೋರಿಸಿ ಬಚಾವ್ ಆಗಬಹುದು. 

ಆದರೆ, ಅಲ್ಲಿಯೂ ಉಪೇಂದ್ರ ವಿಶಿಷ್ಟತೆ ಮೆರೆದುಬಿಟ್ಟಿದ್ದಾರೆ. ಉಪೇಂದ್ರ ಚಿತ್ರದಲ್ಲಿಯೇ ಪ್ರಾರಂಭದಲ್ಲಿ ‘ಈ ಚಿತ್ರದಲ್ಲಿ ಬರುವ ಪ್ರತಿ ಘಟನೆ, ಸನ್ನಿವೇಶವೂ ಸತ್ಯ’’ ಎಂದು ತೋರಿಸಿ ಗೆದ್ದಿದ್ದ ನಟ ಉಪೇಂದ್ರ. ಆದರೆ ರಾಜಕೀಯ ಹಾಗಲ್ಲ. ಅದರಲ್ಲೂ ಆದರ್ಶಗಳನ್ನೇ ಮೈತುಂಬಾ ಹೊದ್ದುಕೊಂಡಿರುವವರನ್ನು ರಾಜಕಾರಣ ಅಷ್ಟು ಸುಲಭವಾಗಿ ಒಳಗೆ ಬಿಟ್ಟುಕೊಳ್ಳುವುದಿಲ್ಲ. ಎಂಥ ಬುದ್ದಿವಂತರೇ ಆಗಿದ್ದರೂ, ಅರ್ಥವಾಗುವುದಿಲ್ಲ. 

ಕರ್ನಾಟಕದಲ್ಲಿ ರಾಜಕೀಯಕ್ಕೂ, ಸಿನಿಮಾಗೂ ಸಂಬಂಧ ಅಷ್ಟಕ್ಕಷ್ಟೆ. ಸಿನಿಮಾದಿಂದ ರಾಜಕೀಯಕ್ಕೆ ಹೋಗಿ ಅತ್ಯುನ್ನತ ಸ್ಥಾನ ಅಲಂಕರಿಸಿದವರಲ್ಲಿ ನಂಬರ್ ಒನ್ ಎಂದರೆ ಅಂಬರೀಷ್ ಮಾತ್ರ. ರಾಜ್​ಕುಮಾರ್​ಗೆ ಅಂತಹ ಸ್ಥಾನ ಸಿಗುತ್ತಿತ್ತೇನೋ..

upendra_stars_politics.jpgಆದರೆ, ರಾಜಕೀಯದ ಸಹವಾಸವೇ ಬೇಡ ಎಂದ ರಾಜ್, ಕನ್ನಡಿಗರ ಮನಸ್ಸಿನಲ್ಲಿ, ಹೃದಯದಲ್ಲಿ ರಾಜಕುಮಾರನಾಗಿಯೇ ಉಳಿದು ಹೋದರು. ಅವರನ್ನು ಬಿಟ್ಟರೆ ಅನಂತ್​ನಾಗ್, ಉಮಾಶ್ರೀ , ರಮ್ಯಾ, ಮುಖ್ಯಮಂತ್ರಿ ಚಂದ್ರು, ಬಿ.ಸಿ.ಪಾಟೀಲ್, ತಾರಾ ಅನುರಾಧ, ಜಯಮಾಲ, ಶ್ರೀನಾಥ್ ಮುಂತಾದವರು ಸಿಗುತ್ತಾರೆ. ಆದರೆ, ಅವರೆಲ್ಲ ಕಲಾವಿದರು ಎಂಬ ಕಾರಣಕ್ಕಷ್ಟೇ ಗೆದ್ದವರಲ್ಲ. ರಾಜಕೀಯದಲ್ಲಿ ಬೆವರು ಬಸಿದ ಮೇಲೇ ಗೆಲುವು ದಕ್ಕಿದ್ದು. ಮಾಳವಿಕಾ ಅವಿನಾಶ್, ಭಾವನಾ, ಶಿಲ್ಪಾ ಗಣೇಶ್, ಸಾಯಿಕುಮಾರ್, ಪೂಜಾ ಗಾಂಧಿ, ರಕ್ಷಿತಾ ಮೊದಲಾದವರು ಈಗಲೂ ಬೆವರು ಸುರಿಸುತ್ತಲೇ ಇದ್ದಾರೆ.

ಅದಕ್ಕೆ ಕಾರಣ, ಕನ್ನಡಿಗರ ಮನಸ್ಥಿತಿ. ಆಂಧ್ರಪ್ರದೇಶ, ತಮಿಳುನಾಡಿನ ಕಥೆಯೇ ಬೇರೆ. ಕರ್ನಾಟಕವೇ ಬೇರೆ. ಕರ್ನಾಟಕದಲ್ಲಿ ಡೈಲಾಗುಗಳು, ಸಿನಿಮಾಗಳು ಆಕರ್ಷಣೆಗಳಷ್ಟೇ ಹೊರತು, ಮತಗಳಾಗುವುದಿಲ್ಲ. ಜನಪ್ರಿಯತೆಯ ಉತ್ತುಂಗದಲ್ಲಿದ್ದಾಗಲೇ ಅಂಬರೀಷ್, ರಮ್ಯಾರಂತಹ ಸ್ಟಾರ್​ಗಳನ್ನು ಮನೆಗೆ ಕಳಿಸಿದ ಇತಿಹಾಸ ಕರ್ನಾಟಕಕ್ಕಿದೆ.

super_upendra1_hairstyle.jpgಅಂತಹ ರಾಜಕೀಯದ ಇತಿಹಾಸದ ಪುಟ ಸೇರುವ ಸುಳಿವು ನೀಡಿದ್ದಾರೆ ಉಪೇಂದ್ರ. ಗೆಲ್ಲಲಿ ಎಂಬುದು ಹಾರೈಕೆ. ಏಕೆಂದರೆ, ಅವರಲ್ಲಿ ಕನಸುಗಳಿವೆ. ಧ್ಯೇಯೋದ್ದೇಶಗಳಿವೆ. ಐಡಿಯಾಗಳಿವೆ. ಎಲ್ಲಕ್ಕಿಂತ ಮಿಗಿಲಾಗಿ ಈಗಿನ ರಾಜಕಾರಣದಲ್ಲಿ ಇಲ್ಲವೇ ಇಲ್ಲ ಎನ್ನುವಷ್ಟು ವಿರಳವಾಗಿರುವ ಪ್ರಾಮಾಣಿಕತೆಯಿದೆ.

Amitab Bachchan Helps Film Workers On Labours Day

Food Kits Distribution To Media Personnel By Ministers Bc Patil Gallery