` ರಾಜಕೀಯಕ್ಕೆ ಬರ್ತಾರಾ ಉಪೇಂದ್ರ..? ಯಾವಾಗ ಬರ್ತಾರೆ..?  - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
upendra still
Upendra Image

ನಟ ಉಪೇಂದ್ರ ಉಳಿದ ನಟರ ಹಾಗಲ್ಲ. ರಾಜಕೀಯವಾಗಿ ತಮ್ಮ ನಿಲುವುಗಳ ಬಗ್ಗೆ ಅತ್ಯಂತ ಸ್ಪಷ್ಟತೆ ಇಟ್ಟುಕೊಂಡಿರುವ ನಟ. ರಾಜಕೀಯದಲ್ಲಿ ಏನೇ ಬೆಳವಣಿಗೆಯಾಗಲಿ, ಅದು ನನಗೆ ಅರ್ಥವಾಗುವುದಿಲ್ಲ, ನನಗೆ ಗೊತ್ತಿಲ್ಲ ಎಂದು ಹೇಳಿಕೊಂಡು ಕೂರುವವರೂ ಅಲ್ಲ. ಅದು ಈಗಾಗಲೇ ಹಲವು ಬಾರಿ ಸಾಬೀತಾಗಿದೆ.

ನೋಟ್​ಬ್ಯಾನ್ ಮಾಡುವ ವರ್ಷಕ್ಕೆ ಮುಂಚೆಯೇ, ಇಂಥಾದ್ದೊಂದು ಕ್ರಮದಿಂದ ಕಪ್ಪುಹಣವನ್ನು ಮಟ್ಟ ಹಾಕಬಹುದು ಎಂಬ ಚಿಂತನೆಯನ್ನು ಬಹಿರಂಗವಾಗಿಯೇ ಹೇಳಿದ್ದವರು ಉಪೇಂದ್ರ. ತಮ್ಮ ಸಿನಿಮಾಗಳಲ್ಲಿ ರಾಜಕೀಯ ಸಂದೇಶಗಳನ್ನು ಹೇಳುವಲ್ಲಿಯೂ ಅವರು ಹಿಂದೆ ಬಿದ್ದಿಲ್ಲ. ಕೆಲವು ಉತ್ಪ್ರೇಕ್ಷೆಯೆನಿಸಿದರೂ, ಅದನ್ನು ಸಿನಿಮಾದಲ್ಲಿ ಎಷ್ಟು ಬೇಕೋ ಅಷ್ಟು ಸ್ಪಷ್ಟವಾಗಿ, ಸಿನಿಮಾ ಆದ್ದರಿಂದ ತುಸು ರಂಜನಾತ್ಮಕವಾಗಿ ಹೇಳಿಕೊಂಡೇ ಬಂದವರು ಉಪೇಂದ್ರ. ಲೋಕಪಾಲ್​ ಚಳವಳಿ ಆರಂಭವಾದಾಗ, ಅಣ್ಣಾ ಹಜಾರೆಯವರ ಜೊತೆ ಬಹಿರಂಗವಾಗಿಯೇ ಗುರುತಿಸಿಕೊಂಡಿದ್ದವರು.

ಇತ್ತೀಚೆಗೆ, ಜಿಎಸ್​ಟಿ ಬಗ್ಗೆ, ಐಟಿ ರೇಡುಗಳ ಬಗ್ಗೆ ತಮ್ಮದೇ ನಿಲುವು ವ್ಯಕ್ತಪಡಿಸಿದ್ದ ಉಪೇಂದ್ರ, ರಾಜಕೀಯಕ್ಕೆ ಬರುತ್ತಾರೆ ಎನ್ನುವ ಸುದ್ದಿ ತುಂಬಾ ವರ್ಷಗಳಿಂದ ಇದೆ. ಆದರೆ, ಇಂಥಾದ್ದೊಂದು ಪ್ರಶ್ನೆ ಕೇಳಿ ಬಂದಾಗಲೆಲ್ಲ, ನೋಡೋಣ ಎನ್ನುತ್ತ ಅಡ್ಡಗೋಡೆಯ ಮೇಲೆ ದೀಪವಿಡುತ್ತಿದ್ದ ಉಪೇಂದ್ರ, ಈಗ ರಾಜಕೀಯಕ್ಕೆ ಎಂಟ್ರಿ ಕೊಡುವ ಬಗ್ಗೆ ಗಂಭೀರವಾಗಿ ಆಲೋಚಿಸುತ್ತಿದ್ದಾರಂತೆ. ಆದರೆ, ರಾಜಕೀಯ ಮಾರ್ಗದಲ್ಲಿ ಬರಬೇಕೋ ಅಥವಾ ಸಮಾಜಮುಖಿ ಕೆಲಸಗಳ ಮೂಲಕ ಜನರಿಗೆ ಹತ್ತಿರವಾಗಬೇಕೋ ಎಂಬ ಬಗ್ಗೆ ಅವರಿಗೆ ಇನ್ನೂ ಸ್ಪಷ್ಟತೆ ಸಿಕ್ಕಿಲ್ಲ.

ಸದ್ಯಕ್ಕಂತೂ ಉಪೇಂದ್ರ ಎಂದಿನಂತೆ ನಿಗೂಢತೆ ಕಾಯ್ದುಕೊಂಡಿದ್ದಾರೆ. ಕೆಲವೇ ದಿನಗಳಲ್ಲಿ ಸ್ಪಷ್ಟ ಉತ್ತರ ಸಿಕ್ಕರೂ ಸಿಗಬಹುದು. ಇಂಥ ಪ್ರಶ್ನೆಗಳ ಮಧ್ಯೆ ಉಪೇಂದ್ರ ಸ್ಪಷ್ಟವಾಗಿ ಹೇಳಿರುವ ಒಂದೇ ಒಂದು ಮಾತೆಂದರೆ, ಚಾಮರಾಜಪೇಟೆಯಿಂದ ಅವರು ಕಣಕ್ಕಿಳಿಯುತ್ತಿಲ್ಲ. ಅಂದಹಾಗೆ ರಾಜಕೀಯಕ್ಕೆ ಬಂದರೆ ಯಾವ ಪಕ್ಷದಿಂದ ಬರಬೇಕು ಎಂಬ ಬಗ್ಗೆ ಕೂಡಾ ಉಪೇಂದ್ರ ಅವರಿಗೆ ಇನ್ನೂ ಸ್ಪಷ್ಟತೆ ಇದ್ದ ಹಾಗಿಲ್ಲ.

ಇತ್ತೀಚೆಗೆ ಕೆಲವು ತಿಂಗಳಿಂದ  ರಾಜಕೀಯ ಹಾಗೂ ಸಾಮಾಜಿಕ ವಿಷಯಗಳಲ್ಲಿ ತಮ್ಮ ಸ್ಪಷ್ಟ ನಿಲುವುಗಳನ್ನು ಟ್ವೀಟರ್ ಹಾಗೂ ಸುದ್ದಿ ವಾಹಿನಿಗಳ ಮೂಲಕ ಬಹಿರಂಗಪಡಿಸು ತ್ತಲೇ ಇರುವ ಉಪೇಂದ್ರ, ಅವುಗಳನ್ನು ರಿಯಲ್ ಮಾಡುವ ಚಿಂತನೆಯಲ್ಲಿರುವುದಂತೂ ಹೌದು. ಅದಕ್ಕಾಗಿ ಅವರು ರಾಜಕೀಯ ರಂಗ ಪ್ರವೇಶಿಸುವ ಚಿಂತನೆಯಲ್ಲಿ ಇದ್ದಾರೆ ಎನ್ನುತ್ತಾರೆ ಉಪೇಂದ್ರ ಅವರ ಒಬ್ಬ ರಾಜಕೀಯ ಚಿಂತನ ಸಹವರ್ತಿ. ಇಷ್ಟಕ್ಕೂ ಉಪೇಂದ್ರ ರಿಯಲ್ಲಾಗಿ ರಾಜಕೀಯ ಪ್ರವೇಶ ಮಾಡುತ್ತಾರಾ? ಬಹುಶಃ ಒಂದೆರಡು ತಿಂಗಳಲ್ಲಿ ಉತ್ತರ ಸಿಗಬಹುದು.

India Vs England Pressmeet Gallery

Odeya Audio Launch Gallery