ಸಿನಿಮಾ ಪ್ರೇಮಿಗಳಿಗೆ ಪ್ರತಿ ಶುಕ್ರವಾರ ಹಬ್ಬಾನೇ. ಹೊಸ ಹೊಸ ಚಿತ್ರಗಳು ಬಿಡುಗಡೆಯಾಗುತ್ತಲೇ ಇರುತ್ತವೆ. ಈ ಶುಕ್ರವಾರದ ಸಿನಿಮಾ ಹಬ್ಬಕ್ಕೆ ವಿಶೇಷವಿದೆ. ಏಕೆಂದರೆ, ಈ ವಾರ ತೆರೆ ಕಾಣುತ್ತಿರುವ ಮೂರು ಚಿತ್ರಗಳಲ್ಲಿ ಶಿವರಾಜ್ ಕುಮಾರ್ ಅಭಿನಯದ ಚಿತ್ರವೂ ಇದೆ
ಮಾಸ್ ಲೀಡರ್ - ಈ ವಾರದ ಚಿತ್ರಗಳಲ್ಲಿ ಅತಿ ಹೆಚ್ಚು ನಿರೀಕ್ಷೆ ಮೂಡಿಸಿರುವ ಚಿತ್ರ. ಶಿವರಾಜ್ ಕುಮಾರ್ಗೆ ಎದುರಾಗಿ ಲೂಸ್ ಮಾದ ಯೋಗಿ ನಟಿಸಿರುವುದು ವಿಶೇಷ. ವಿಜಯ್ ರಾಘವೇಂದ್ರ ಮತ್ತು ಗುರು ಜಗ್ಗೇಶ್ ಕೂಡಾ ಪ್ರಮುಖ ಪಾತ್ರದಲ್ಲಿದ್ಧಾರೆ. ಪ್ರಣೀತಾ ಮತ್ತು ಶರ್ಮಿಳಾ ಮಾಂಡ್ರೆ ನಾಯಕಿಯರು. ತರುಣ್ ಶಿವಪ್ಪ ನಿರ್ಮಿಸಿರುವ ಚಿತ್ರದ ನಿರ್ದೇಶಕರು ನರಸಿಂಹ.
ಶಿವಣ್ಣ ಆರ್ಮಿ ಆಫೀಸರ್ ಆಗಿ ಕಾಣಿಸಿಕೊಂಡಿರುವ ಚಿತ್ರವನ್ನು ಈಗಾಗಲೇ ಸುದೀಪ್ ನೋಡಿ ಹೊಗಳಿದ್ದಾರೆ. ಇನ್ನೇನಿದ್ದರೂ ಜನ ಮೆಚ್ಚಬೇಕು.
ಜಾನಿ - ವಿಜಯ್ ರಾಘವೇಂದ್ರಗೆ ಈ ವಾರ ಡಬಲ್ ಖುಷಿ ಎಂದರೆ ಅಚ್ಚರಿಯಿಲ್ಲ. ಶಿವಣ್ಣನ ಜೊತೆ ನಟಿಸಿರುವ ಮಾಸ್ ಲೀಡರ್ ಜೊತೆಯಲ್ಲೇ ಅವರೇ ಪ್ರಮುಖ ಪಾತ್ರದಲ್ಲಿರುವ ಜಾನಿ ಕೂಡಾ ಇದೇ ಶುಕ್ರವಾರ ರಿಲೀಸ್ ಆಗುತ್ತಿದೆ. ಪಿಕೆಹೆಚ್ ದಾಸ್ ನಿರ್ದೇಶನದ ಮೊದಲ ಚಿತ್ರ ಜಾನಿ. ಕಾಮಿಡಿ ಲವ್ ಸ್ಟೋರಿಯಾಗಿರುವ ಚಿತ್ರದಲ್ಲಿ ಮಿಲನ ನಾಗರಾಜ್ ನಾಯಕಿ. ಸುಮನ್, ಸಾಧುಕೋಕಿಲ ಸೇರಿದಂತೆ ಹಲವು ಕಲಾವಿದರ ಚಿತ್ರದಲ್ಲಿದ್ದಾರೆ.