ಚಾಲೆಂಜಿಂಗ್ ಸ್ಟಾರ್ ದರ್ಶನ್, ತಮ್ಮ ಗೆಳೆಯರ ಚಿತ್ರದಲ್ಲಿ ಅತಿಥಿ ನಟರಾಗಿ ಬರುವುದು ಹೊಸದೇನಲ್ಲ. ಇತ್ತೀಚಿನ ಉದಾಹರಣೆ ಚೌಕ. 50ನೇ ಚಿತ್ರದಲ್ಲಿ ನಟಿಸುತ್ತಿರುವ ಸೀನಿಯರ್ ಆಗಿದ್ದರೂ, ಯಾವುದೇ ಚಿತ್ರಕ್ಕೆ ಹಿನ್ನೆಲೆ ಧ್ವನಿ ಕೊಡುವ ಸಾಹಸಕ್ಕೆ ದರ್ಶನ್ ಕೈ ಹಾಕಿರಲಿಲ್ಲ. ಈಗ ಆ ಸಾಹಸಕ್ಕೂ ಕೈ ಹಾಕಿದ್ದಾರೆ.
ಧೃವ ಸರ್ಜಾ ಅಭಿನಯದ ಭರ್ಜರಿ ಚಿತ್ರ ಓಪನ್ ಆಗುವುದೇ ದರ್ಶನ್ ವಾಯ್ಸ್‍ನಿಂದ. ಅಷ್ಟೇ ಅಲ್ಲ, ಇಡೀ ಚಿತ್ರದಲ್ಲಿ ದರ್ಶನ್ ವಾಯ್ಸ್ ಬರುತ್ತಲೇ ಇರುತ್ತೆ. ಇಡೀ ಚಿತ್ರದಲ್ಲಿ ಸುಮಾರು 12 ನಿಮಿಷ ದರ್ಶನ್ ಧ್ವನಿಯನ್ನು ಬಳಸಿಕೊಳ್ಳಲಾಗಿದೆ. ಚಿತ್ರದಲ್ಲಿ ಅನಿರೀಕ್ಷಿತ ತಿರುವುಗಳು ಸಾಕಷ್ಟಿದ್ದು, ಅದಕ್ಕೆಲ್ಲ ಫೋರ್ಸ್ ಬರಬೇಕೆಂದರೆ, ಗಡುಸಾದ ಧ್ವನಿ ಬೇಕು ಎಂದುಕೊಂಡ ಚಿತ್ರತಂಡ, ದರ್ಶನ್ ಅವರನ್ನು ಕೇಳಿಕೊಂಡಿದೆ. ದರ್ಶನ್ ಖುಷಿಯಿಂದಲೇ ಒಪ್ಪಿದ್ದಾರೆ.
ಕನ್ನಡದಲ್ಲಿ ಒಬ್ಬ ನಟರ ಚಿತ್ರಗಳಿಗೆ ಬೇರೆ ನಟರು ಹಿನ್ನೆಲೆ ಧ್ವನಿ ನೀಡುವುದು ಹೊಸದೇನಲ್ಲ. ಈ ಹಿಂದೆ ದರ್ಶನ್, ಪುನೀತ್ ಚಿತ್ರಕ್ಕೆ ಸುದೀಪ್ ಧ್ವನಿ ನೀಡಿದ್ದರು. ಸುದೀಪ್ ಚಿತ್ರದಲ್ಲಿ ಶಿವರಾಜ್ ಕುಮಾರ್, ಪಾತ್ರಗಳನ್ನು ಪರಿಚಯಿಸಿದ್ದರು. ಕೋಮಲ್ ಚಿತ್ರಕ್ಕೆ ಉಪೇಂದ್ರ ಧ್ವನಿಯಾಗಿದ್ದರು. ಯೋಗರಾಜ್ ಭಟ್ ಧ್ವನಿ ಹಲವು ಚಿತ್ರಗಳಲ್ಲಿ ಕೇಳಿಸಿದೆ. ಈಗ ದರ್ಶನ್ ಸರದಿ.