ಬಿಗ್ ಬಾಸ್ ಖ್ಯಾತಿಯ ಪ್ರಥಮ್ ರಂಪಾಟ, ರಗಳೆಗಳು ಮುಗಿಯುವ ಹಾಗೆ ಕಾಣುತ್ತಿಲ್ಲ. ಬಿಗ್ ಬಾಸ್ ಗೆದ್ದ ಕ್ಷಣದಲ್ಲಿ ವಿಚಿತ್ರವಾಗಿ ವರ್ತಿಸಿದ್ದ ಪ್ರಥಮ್, ನಂತರ ಆತ್ಮಹತ್ಯೆಗೆ ಯತ್ನಿಸಿ, ಅದನ್ನು ಫೇಸ್ ಬುಕ್ ನಲ್ಲಿ ಲೈವ್ ಮಾಡಿ ವಿವಾದ ಸೃಷ್ಟಿಸಿದ್ದರು. ಈಗ ಗೆಳೆಯ ಹಾಗೂ ಸಹನಟ ಭುವನ್ ತೊಡೆ ಕಚ್ಚಿ ಸುದ್ದಿಯಾಗಿದ್ದಾರೆ.
ಈ ಘಟನೆ ನಡೆದಿರೋದು ಸಂಜು ಮತ್ತು ನಾನು ಧಾರಾವಾಹಿ ಶೂಟಿಂಗ್ ನಲ್ಲಿ. ಶೂಟಿಂಗ್ ವೇಳೆ ಪ್ರಥಮ್, ಭುವನ್ ಜೊತೆ ವಿಚಿತ್ರವಾಗಿ ವರ್ತಿಸುತ್ತಿದ್ದರಂತೆ. ಇದೇ ವಿಚಾರಕ್ಕೆ ವಾಗ್ವಾದವೂ ಆಗಿತ್ತಂತೆ. ಆ ಗಲಾಟೆ ವಿಪರೀತಕ್ಕೆ ಹೋಗಿ, ಪ್ರಥಮ್ ಭುವನ್ ತೊಡೆಗೇ ಬಾಯಿ ಹಾಕಿಬಿಟ್ಟಿದ್ದಾರೆ. ಭುವನ್ ತೊಡೆಗೆ ಗಾಯವಾಗಿದೆ. ತಲಘಟ್ಟಪುರ ಸ್ಟೇಷನ್ ನಲ್ಲಿ ಕಂಪ್ಲೇಂಟು ದಾಖಲಾಗಿದೆ. ಪ್ರಥಮ್ ಕುಡಿದ ಮತ್ತಿನಲ್ಲಿ ನನಗೆ ಕಚ್ಚಿದ್ದಾನೆ ಎಂದು ಸಹನಟ ಭುವನ್ ದೂರು ಕೊಟ್ಟಿದ್ದಾರೆ.
ಸಂಜು ಮತ್ತು ನಾನು ಧಾರಾವಾಹಿಯ ನಟಿ ಸಂಜನಾ ಜೊತೆ (ಆಕೆ ಕೂಡಾ ಬಿಗ್ ಬಾಸ್ ನಲ್ಲಿದ್ದವರು) ಭುವನ್ ಕ್ಲೋಸ್ ಆಗಿದ್ದ ವಿಚಾರವೇ ಇಬ್ಬರ ಜಗಳಕ್ಕೆ ಕಾರಣ ಎನ್ನಲಾಗುತ್ತಿದೆ. ಸಂಜನಾ ಮತ್ತು ಭುವನ್ ಒಂದೇ ರೂಂನಲ್ಲಿದ್ದರಂತೆ. ಅಲ್ಲಿಗೆ ಹೋದ ಪ್ರಥಮ್, ಭುವನ್ ಜೊತೆ ಜಗಳವಾಡಿದರು ಎನ್ನಲಾಗುತ್ತಿದೆ.
ನಾನು ತಪ್ಪು ಮಾಡಿಲ್ಲ. ನನಗೆ ಇಂತಹ ಪ್ರಚಾರದ ಹುಚ್ಚಿಲ್ಲ ಎನ್ನುವುದು ಭುವನ್ ವಾದವಾದರೆ, ಅದು ಸಣ್ಣ ಗಲಾಟೆಯಷ್ಟೇ ಎನ್ನುವುದು ಪ್ರಥಮ್ ವಾದ. ಒಟ್ಟಿನಲ್ಲಿ ಪ್ರಥಮ್ ಈ ಗಲಾಟೆಯಿಂದ ಮತ್ತೊಮ್ಮೆ ಠಾಣೆ ಮೆಟ್ಟಿಲೇರಬೇಕಾಗಿದೆ.