ರಾಮ್ ಗೋಪಾಲ್ ವರ್ಮಾ ಇರೋದೇ ಹಾಗೆ. ವಿವಾದ ಅನ್ನೋದನ್ನು ಬೆನ್ನತ್ತಿ ಹೋಗಿ, ಅಲ್ಲೊಂದು ಕ್ಯಾಮೆರಾ ಇಟ್ಟು, ಅದನ್ನು ಸಿನಿಮಾ ಆಗಿಸೋದ್ರಲ್ಲಿ ಅವರಷ್ಟು ಎಕ್ಸ್‍ಪರ್ಟ್ ಇನ್ನೊಬ್ಬರಿಲ್ಲ. ಬಾಳಾ ಠಾಕ್ರೆ, ವೀರಪ್ಪನ್, ಆಂಧ್ರಪ್ರದೇಶದ ಡಾನ್‍ಗಳು, ಮುಂಬೈ ದಾಳಿ, ಹೀಗೆ ರಾಮ್‍ಗೋಪಾಲ್ ವರ್ಮಾ ರಿಯಲೆಸ್ಟಿಕ್ ಕಥೆಗಳನ್ನು ಮಾಡೋದ್ರಲ್ಲಿ ಎತ್ತಿದ ಕೈ.
ಇಂಥ ರಾಮ್‍ಗೋಪಾಲ್ ವರ್ಮಾ, ರೈ ಅನ್ನೋ ಸಿನಿಮಾ ಮಾಡೋದಾಗಿ ಹೇಳಿದ್ರು. ಅದು ಮುತ್ತಪ್ಪ ರೈ ಲೈಫ್ ಸ್ಟೋರಿ. ವಿವೇಕ್ ಒಬೇರಾಯ್ ನಾಯಕರಾಗಿದ್ದ ರೈ ಚಿತ್ರದ ಪುಟ್ಟದೊಂದು ಟೀಸರ್‍ನ್ನೂ ಬಿಟ್ಟಿದ್ದರು ವರ್ಮಾ.
ಈಗ ಇಡೀ ಚಿತ್ರವನ್ನೇ ಪ್ಯಾಕಪ್ ಮಾಡಿದ್ದಾರೆ ವರ್ಮಾ. ಅದಕ್ಕೆ ಕಾರಣ ಮುತ್ತಪ್ಪ ರೈ ಅಂತೆ. ಎಲ್ಲವನ್ನೂ ಬಿಟ್ಟು ಬದುಕುತ್ತಿರುವಾಗ, ಮತ್ಯಾಕೆ ಹಳೆಯದನ್ನು ನೆನಪಿಸಿ ಜನರ ಮುಂದೆ ಹೋಗಬೇಕು ಎಂದು ಗೆಳೆಯರೊಬ್ಬರು ಹೇಳಿದ ಮಾತು, ರೈಗೆ ತಟ್ಟಿದೆ. ಅದೇ ಕಾರಣಕ್ಕೆ ರೈ ಸಿನಿಮಾ ಡ್ರಾಪ್ ಮಾಡೋಕೆ ವರ್ಮಾಗೆ ಸೂಚಿಸಿದರು ಎನ್ನಲಾಗಿದೆ.
ರೈ ಸಿನಿಮಾ ಡ್ರಾಪ್ ಆಗಿರುವ ಕಾರಣ, ಶಿವರಾಜ್ ಕುಮಾರ್‍ರನ್ನು ಹಾಕಿಕೊಂಡು ಮಾಡುತ್ತಾರೆ ಎನ್ನಲಾಗುತ್ತಿದ್ದ ಸೌಥ್ ಸಿನಿಮಾ ಕೂಡಾ ಟೇಕಾಫ್ ಆಗುವುದು ಅನುಮಾನ ಎನ್ನಲಾಗಿದೆ. ಯಾಕೋ ಇತ್ತೀಚೆಗೆ ವರ್ಮಾ ಚಿತ್ರಗಳು ಸುದ್ದಿಯಿಂದ ಮೇಲೇಳುತ್ತಲೇ ಇಲ್ಲ.