ಸುಮ್ಮನೆ ನೆನಪಿಸಿಕೊಳ್ಳಿ. ಇತ್ತೀಚೆಗೆ ಹಿಟ್ ಆದ ಎರಡು ಚಿತ್ರಗಳಲ್ಲಿ ಒಂದು ರಾಜಕುಮಾರ. ಇಡೀ ಚಿತ್ರದಲ್ಲಿ ರಾಜ್ಕುಮಾರ್ ಛಾಯೆ ಇದ್ದೇ ಇದೆ. ಚಿತ್ರದ ಹಾಡುಗಳಲ್ಲಿ, ಡೈಲಾಗುಗಳಲ್ಲಿ, ಚಿತ್ರದಲ್ಲಿ, ಚಿತ್ರದ ಕಥೆಯಲ್ಲಿ ರಾಜ್ ಇದ್ದೇ ಇರುತ್ತಾರೆ.
ಇನ್ನೊಂದು ಹಿಟ್ ಚಿತ್ರ ಬಂಗಾರ S/O ಬಂಗಾರದ ಮನುಷ್ಯ ಚಿತ್ರದಲ್ಲೂ ಹಾಗೇ. ಚಿತ್ರದುದ್ದಕ್ಕೂ ರಾಜ್ ಕಾಡುತ್ತಲೇ ಹೋಗುತ್ತಾರೆ. ನಾಗರಹಾವು ಚಿತ್ರದಲ್ಲಿ ರಾಜ್ಕುಮಾರ್ರನ್ನು ಒಂದು ವಿಶೇಷ ಪಾತ್ರವಾಗಿ ತೋರಿಸಲಾಗಿತ್ತು. ಗ್ರಾಫಿಕ್ಸ್ನಲ್ಲಿ ಮರುಸೃಷ್ಟಿ ಮಾಡಿ ಚಿತ್ರದ ಬಗ್ಗೆ ದೊಡ್ಡ ಹೈಪ್ ಸೃಷ್ಟಿಸಲಾಗಿತ್ತು.
ಯಶ್ ಅಭಿನಯದ ಸೂಪರ್ ಹಿಟ್ ಚಿತ್ರ ನಡೆಯುವುದೇ ವಿಷ್ಣುವರ್ಧನ್ರ ರಾಮಾಚಾರಿ ನೆನಪಿನಲ್ಲಿ. ಯಶ್ ಅಭಿನಯದ ಇನ್ನೊಂದು ಚಿತ್ರ ಗಜಕೇಸರಿಯಲ್ಲೂ ಅಷ್ಟೆ, ಯಶ್, ರಾಜ್ಕುಮಾರ್ ಅಭಿಮಾನಿ. ಚಿತ್ರದ ಕಥೆಯಲ್ಲಿ ರಾಜ್ ನೆನಪಾಗುತ್ತಲೇ ಇರುತ್ತಾರೆ. ಸುದೀಪ್ ಅಭಿನಯದ ಕೋಟಿಗೊಬ್ಬ 2 ಟೈಟಲ್ನಲ್ಲೇ ವಿಷ್ಣು ಇದ್ದರು. ಕೋಟಿಗೊಬ್ಬ 3ರಲ್ಲೂ ವಿಷ್ಣು ನೆನಪು ಕಾಡುತ್ತೆ. ಸುದೀಪ್ ಅಭಿನಯದ ಸೂಪರ್ ಹಿಟ್ ಚಿತ್ರವೊಂದರ ಹೆಸರೇ ವಿಷ್ಣುವರ್ಧನ.
ಆ ಚಿತ್ರದಲ್ಲಿ ಸುದೀಪ್ ಪಾತ್ರದ ಹೆಸರೂ ವಿಷ್ಣುವರ್ಧನ. ಇದು ಹೊಸದೇನಲ್ಲ. ಇನ್ನು ಈಗ ಬರುತ್ತಿರುವ ಚಿತ್ರಗಳಲ್ಲೂ ರಾಜ್ ಇದ್ದಾರೆ. ವಿಷ್ಣುವೂ ಇದ್ದಾರೆ. ಶರಣ್ ಮತ್ತು ಚಿಕ್ಕಣ್ಣ ಅಭಿನಯದ ರಾಜ್ ವಿಷ್ಣು ಚಿತ್ರದಲ್ಲಿ ಇಬ್ಬರೂ ದಿಗ್ಗಜರ ನೆನಪಾಗುತ್ತಿದೆ. ದುನಿಯಾ ವಿಜಿ ಅಭಿನಯದ ಕನಕ ಚಿತ್ರದಲ್ಲೂ ಅಷ್ಟೆ. ಹೀರೋ ರಾಜ್ ಕುಮಾರ್ ಅಭಿಮಾನಿ ಮತ್ತು ಆಟೋ ಡ್ರೈವರ್ ಎನ್ನುವುದಷ್ಟೇ ನಿರ್ದೇಶಕ ಹೇಳಿರುವ ಕಥೆಯ ಎಳೆ. ಸಂಭ್ರಮವವೇ ಇರಲಿ, ಸಂದೇಶವೇ ಇರಲಿ.. ಹಾಸ್ಯ, ವಿಷಾದ, ಜೀವನ..ಹೀಗೆ ಯಾವುದೇ ಇರಲಿ.
ಚಿತ್ರರಂಗ ರಾಜ್ ವಿಷ್ಣು ಇಬ್ಬರನ್ನೂ ಮರೆಯೋದಿಲ್ಲ ಎನ್ನುವುದಕ್ಕೆ ಪದೇ ಪದೇ ಸಾಕ್ಷಿಗಳು ಸಿಗುತ್ತಲೇ ಹೋಗುತ್ತವೆ. ಸಾಮಾನ್ಯವಾಗಿ ಚಾಲ್ತಿಯಲ್ಲಿರುವ ಸ್ಟಾರ್ಗಳು ವರ್ಷಕ್ಕೆ ಒಂದೋ ಎರಡೋ ಚಿತ್ರ ಮಾಡಿದರೆ ಹೆಚ್ಚು. ಆದರೆ, ರಾಜ್ ವಿಷ್ಣು ಪ್ರತೀ ವರ್ಷ ರಿಲೀಸ್ ಆಗುವ 100 ಚಿತ್ರಗಳಲ್ಲಿ ಕನಿಷ್ಠ ಹತ್ತರಲ್ಲಾದರೂ ಒಂದು ಪಾತ್ರವಾಗಿರುತ್ತಾರೆ. ಕಥೆಯಾಗಿರುತ್ತಾರೆ.
ಭೌತಿಕವಾಗಿ ಇಬ್ಬರೂ ಇಲ್ಲದೇ ಇರಬಹುದು. ಆದರೆ, ಕನ್ನಡ ಚಿತ್ರರಂಗದ ಹಾಲಿ ಸ್ಟಾರ್ಗಳ ಲಿಸ್ಟಲ್ಲಿ ಅವರನ್ನೂ ಸೇರಿಸಿಕೊಳ್ಳಬಹುದು.