` ಸೆಂಚುರಿ ಸ್ಟಾರ್ ಆದರು ಮ್ಯೂಸಿಕ್ ಡೈರೆಕ್ಟರ್ ಹರಿಕೃಷ್ಣ - chitraloka.com | Kannada Movie News, Reviews | Image

User Rating: 5 / 5

Star activeStar activeStar activeStar activeStar active
 
v harikrishna now century star
V Harikrishna Image

ಹರಿಕೃಷ್ಣ ಸೆಂಚುರಿ ಕೃಷ್ಣನಾಗಿಬಿಟ್ಟಿದ್ದಾರೆ. ಅದೂ ಕೇವಲ 11 ವರ್ಷಗಳಲ್ಲಿ. ಹರಿಕೃಷ್ಣ ಸಂಗೀತ ನೀಡಿರುವ ಮುಗುಳುನಗೆ ಚಿತ್ರ ಅವರಿಗೆ 100ನೇ ಚಿತ್ರವಂತೆ. ಅಲ್ಲಿಗೆ ಕನ್ನಡ ಚಿತ್ರರಂಗದ ನೂರು ಚಿತ್ರಗಳಿಗೆ ಸಂಗೀತ ನೀಡಿರುವ ಅತಿರಥರ ಸಾಲಿಗೆ ಸೇರಿದ್ದಾರೆ ಹರಿಕೃಷ್ಣ.

ಹರಿಕೃಷ್ಣ ಸಂಗೀತ ನೀಡಿದ ಮೊದಲ ಚಿತ್ರ ಜೊತೆ ಜೊತೆಯಲಿ. ಅವಕಾಶ ನೀಡಿದ್ದು ದರ್ಶನ್. ಅದುವರೆಗೆ ಹಂಸಲೇಖ, ವಿ.ರವಿಚಂದ್ರನ್, ಸಾಧು ಕೋಕಿಲ, ಗುರುಕಿರಣ್ ಬಳಿ ಅಸಿಸ್ಟೆಂಟ್ ಆಗಿದ್ದ ಹರಿಕೃಷ್ಣ, ನಂತರ ಬೆಳೆದ ದಾರಿ ಸರಳವಾದದ್ದೇನಲ್ಲ. ಬಹುಶಃ, ಸಾಧುಕೋಕಿಲ ಬುದ್ದಿ ಹೇಳದೇ ಹೋಗಿದ್ದರೆ, ಮೆಕಾನಿಕ್ ಆಗಿರುತ್ತಿದ್ದ ಹರಿಕೃಷ್ಣ, ಈಗ ಕನ್ನಡ ಚಿತ್ರರಂಗದ ಬಹುಬೇಡಿಕೆಯ ಸಂಗೀತ ನಿರ್ದೇಶಕ.

ದರ್ಶನ್ ನಿರ್ಮಾಣದ ಚಿತ್ರದಿಂದ ಶುರುವಾದ ಸಂಗೀತ ನಿರ್ದೇಶನದ ಯಾತ್ರೆಯಲ್ಲಿ ಹರಿಕೃಷ್ಣ, ಕನ್ನಡ ಚಿತ್ರರಂಗದ ಸಮಸ್ತ ಸ್ಟಾರ್ಗಳ ಚಿತ್ರಗಳಿಗೂ ಮ್ಯೂಸಿಕ್ ಕೊಟ್ಟಿದ್ದಾರೆ ಎನ್ನುವುದು ಹೆಗ್ಗಳಿಕೆ. ಇದುವರೆಗೆ ಇಂಥಾದ್ದೊಂದು ಹೆಮ್ಮೆ ಹಂಸಲೇಖ ಅವರಿಗೆ ಮಾತ್ರ ಇತ್ತು. ಗುರುವಿನ ಹಾದಿಯಲ್ಲೇ ಸಾಗಿರುವ ಹರಿಕೃಷ್ಣ, ಸಾಹಿತ್ಯ ರಚನೆಗೆ ಮಾತ್ರ ಕೈ ಹಾಕಿಲ್ಲ. ಸತತ 10 ವರ್ಷ ಬೇಡಿಕೆ ಉಳಿಸಿಕೊಳ್ಳುವುದೆಂದರೆ ಸಾಮಾನ್ಯದ ಮಾತಲ್ಲ.

ಪುನೀತ್, ಸುದೀಪ್, ದರ್ಶನ್, ಉಪೇಂದ್ರ, ಯಶ್, ಗಣೇಶ್, ದುನಿಯಾ ವಿಜಿ, ಪ್ರೇಮ್ ಸೇರಿದಂತೆ ಎಲ್ಲ ಸ್ಟಾರ್ಗಳ ಜೊತೆ ಕೆಲಸ ಮಾಡಿದ್ದಾರೆ. ಹೊಸಬರ ಚಿತ್ರಗಳಿಗೂ ಸಂಗೀತ ನೀಡಿ ಗೆಲ್ಲಿಸಿರುವ ಹೆಮ್ಮೆ ಹರಿಕೃಷ್ಣ ಅವರಿಗೆ ಇದೆ. ಅಷ್ಟೇ ಅಲ್ಲ, ಹಾಲಿ ಚಿತ್ರರಂಗದ ಆಲ್ಮೋಸ್ಟ್ ಎಲ್ಲ ಸ್ಟಾರ್ ಡೈರೆಕ್ಟರ್ಗಳ ಜೊತೆಯಲ್ಲೂ ಕೆಲಸ ಮಾಡಿರುವ ಪ್ರತಿಭೆ ಹರಿಕೃಷ್ಣರದ್ದು. ರಾಜ್ಯ ಪ್ರಶಸ್ತಿ, ಫಿಲ್ಮ್ಫೇರ್ ಸೇರಿದಂತೆ ಸಂಗೀತ ನಿರ್ದೇಶನಕ್ಕೆ ದಕ್ಕಬಹುದಾದ ಪ್ರಶಸ್ತಿಗಳೆಲ್ಲ ಬುಟ್ಟಿಗೆ ಬಿದ್ದಿವೆ.

ಜೊತೆ  ಜೊತೆಯಲಿಯಿಂದ ಶುರುವಾದ ಯಾತ್ರೆಯಲ್ಲಿ ಜಾಕಿ, ಸಾರಥಿ, ಬಚ್ಚನ್, ಗಾಳಿಪಟ, ಜಂಗ್ಲಿ, ದೊಡ್ಮನೆ ಹುಡ್ಗ, ರಾಜಕುಮಾರ, ಮಿಸ್ಟರ್ & ಮಿಸೆಸ್ ರಾಮಾಚಾರಿ..ಹೀಗೆ ಹಿಟ್ ಚಿತ್ರಗಳ ದೊಡ್ಡ ಸಾಲೇ ಇದೆ. ಸ್ವತಃ ಆಡಿಯೋ ಕಂಪೆನಿಯನ್ನೂ ಹೊಂದಿರುವ ಹರಿಕೃಷ್ಣ ನಿರ್ಮಾಪಕರೂ ಹೌದು. ಹರಿಕೃಷ್ಣ ಚಿತ್ರ ಯಾತ್ರೆ ಹೀಗೆಯೇ ಮುಂದುವರಿಯಲಿ. ಕನ್ನಡಿಗರ ಕಿವಿಗಳಲ್ಲಿ ಹರಿಕೃಷ್ಣ ಕೇಳುತ್ತಲೇ ಇರಲಿ.