ಕನ್ನಡ ಚಿತ್ರರಂಗದ ಹಬ್ಬವಾಯ್ತು ರಾಜಕುಮಾರನ ಸಂಭ್ರಮ - ತಾರೆಯರ ಸಮಾಗಮ ಬಹುಶಃ ಇಂಥಾದ್ದೊಂದು ಸಂಭ್ರಮ ನಡೆದು ಯಾವ ಕಾಲವಾಗಿತ್ತೋ. ಚಿತ್ರವೊಂದರ ಶತದಿನೋತ್ಸವ ಸಮಾರಂಭದಲ್ಲಿ ಚಿತ್ರರಂಗದ ತಾರೆಯರೆಲ್ಲ ಒಂದಾಗಿ ಸೇರುವುದು, ಶುಭ ಹಾರೈಸುವುದು
ನಿಜಕ್ಕೂ ಅತ್ಯುತ್ತಮ ಬೆಳವಣಿಗೆ. ಆ ಸಮಾರಂಭದಲ್ಲಿ ಎಲ್ಲರೂ ಇದ್ದರು. ಶಿವರಾಜ್ ಕುಮಾರ್, ರಾಘವೇಂದ್ರ ರಾಜ್ಕುಮಾರ್ ಸುದೀಪ್, ಯಶ್, ಜಗ್ಗೇಶ್, ಶ್ರೀಮುರಳಿ, ಫಿಲ್ಮ್ ಚೇಂಬರ್ ಅಧ್ಯಕ್ಷ ಸಾ.ರಾ. ಗೋವಿಂದು...ಹೀಗೆ ಹೆಚ್ಚೂ ಕಡಿಮೆ ಇಡೀ ಚಿತ್ರರಂಗದ ಸಮಾಗಮವಾಗಿತ್ತು.
ಇನ್ನು ಸಂಭ್ರಮದಲ್ಲಿ ಪಾಲ್ಗೊಂಡಿದ್ದ ಕಲಾವಿದರು ಹೇಳಿದ ಮಾತುಗಳು ಚೇತೋಹಾರಿಯಾಗಿದ್ದವು. ಸುದೀಪ್ಗೆ ಖುಷಿ ಕೊಟ್ಟಿದ್ದು ಚಿತ್ರದಲ್ಲಿನ ಅಪ್ಪು ಡ್ಯಾನ್ಸ್. ನಮಗೆ ಅದೆಲ್ಲ ಬರೋಲ್ಲ. ಬಿಡುವಾದಾಗ ಪುನೀತ್ ಬಳಿ ಡ್ಯಾನ್ಸ್ ಹೇಳಿಸಿಕೊಳ್ತೇನೆ ಎಂದರು. ಅಪ್ಪು ನಾಚಿ ನೀರಾದರು. ಬೊಂಬೆ ಹೇಳುತೈತೆ ಹಾಡನ್ನೂ ಹಾಡಿದರು. ಸುದೀಪ್ ಮತ್ತು ಪುನೀತ್ ವೇದಿಕೆ ಮೇಲೆ ಸ್ಟೆಪ್ಪು ಹಾಕಿದರು. ಬೊಂಬೆ ಹೇಳುತೈತೆ ಹಾಡು ಹೇಳುತ್ತ ಶಿವಣ್ಣ, ತಮ್ಮನನ್ನು ಅಪ್ಪಿಕೊಂಡು ಖುಷಿಪಟ್ಟರು. ಜಗ್ಗೇಶ್ ವೇದಿಕೆಯಲ್ಲಿದ್ದವರ ಖುಷಿಗೆ ಒಗ್ಗರಣೆ ಹಾಕಿದರು.
ಇದು ಕನ್ನಡಿಗರ ಗೆಲುವು ಎನ್ನುವ ಮೂಲಕ ಚಿತ್ರದ ಯಶಸ್ಸನ್ನು ಇನ್ನೂ ಮೇಲ್ಮಟ್ಟಕ್ಕೆ ಏರಿಸಿದ್ದು ನಟ ಯಶ್.ಒಟ್ಟಿನಲ್ಲಿ ರಾಜಕುಮಾರನ ಸಂಭ್ರಮದ ವೇದಿಕೆ ಅಕ್ಷರಶಃ ಚಿತ್ರರಂಗದ ಹಬ್ಬವಾಗಿತ್ತು.ಚಿತ್ರದ ಲಾಭದಲ್ಲಿನ ಪಾಲನ್ನು ತಂತ್ರಜ್ಞರಿಗೆ ಹಂಚಿದ ನಿರ್ಮಾಪಕ ಕಾರ್ತಿಕ್ ಗೌಡ, ಎಲ್ಲರ ಮೆಚ್ಚುಗೆ ಗಳಿಸಿದರು.