ಜೂನ್ ಮುಗಿದಿದೆ. ಅಲ್ಲಿಗೆ 2017ರ ಅರ್ಧ ವರ್ಷವೂ ಮುಗಿದಿದೆ.ಅರ್ಧ ವರ್ಷ ಮುಗಿಯುವಾಗಲೇ ರಾಜಕುಮಾರ ಚಿತ್ರ ಶತದಿನೋತ್ಸವ ಆಚರಿಸಿದೆ. ಅದೂ ಒಂದಲ್ಲ..ಎರಡಲ್ಲ..45ಕ್ಕೂ ಹೆಚ್ಚು ಕೇಂದ್ರಗಳಲ್ಲಿ. ಅದು ಸುಮ್ಮನೆ ಮಾತಲ್ಲ.
ಮಾರ್ಚ್ 24ಕ್ಕೆ ರಿಲೀಸ್ ಆಗಿದ್ದ ರಾಜಕುಮಾರ, ಸುದೀರ್ಘ ವಿರಾಮದ ನಂತರ ಕುಟುಂಬಗಳನ್ನು ಚಿತ್ರಮಂದಿರಕ್ಕೆ ಎಳೆದು ತಂದ ಚಿತ್ರ. ಪುನೀತ್ ರಾಜ್ಕುಮಾರ್ ಚಿತ್ರ ಜೀವನದಲ್ಲಿ ಮೈಲುಗಲ್ಲಾಗಬಹುದಾದ ಚಿತ್ರ, ಬಾಕ್ಸಾಫಿಸ್ನಲ್ಲೂ ದಾಖಲೆ ಮಾಡಿದೆ.
ಮೈಸೂರಿನಲ್ಲಂತೂ 3 ಚಿತ್ರಮಂದಿರಗಳಲ್ಲಿ 100 ದಿನ ಪೂರೈಸಿರುವ ಚಿತ್ರ, ದಾಖಲೆಯನ್ನೇ ಬರೆದಿದೆ. 12 ವರ್ಷಗಳ ಹಿಂದೆ ಜೋಗಿ ಚಿತ್ರ ಮೈಸೂರಿನಲ್ಲಿ ಏಕಕಾಲದಲ್ಲಿ 100 ದಿನ ಪ್ರದರ್ಶನ ಕಂಡಿತ್ತಂತೆ. ಅದಾದ ನಂತರ ಆ ದಾಖಲೆ ಬರೆದಿರುವುದು ರಾಜಕುಮಾರ.
ಇದು ಅಭಿಮಾನಿಗಳ ಪ್ರೀತಿ ಹಾರೈಕೆಯ ಫಲ ಎಂದಿದ್ದಾರೆ ಪುನೀತ್ ರಾಜ್ಕುಮಾರ್. ನಟ ಪುನೀತ್ ರಾಜ್ ಕುಮಾರ್ ಮತ್ತು ಚಿತ್ರತಂಡ ನರ್ತಕಿ ಥಿಯೇಟರ್ಗೆ ತೆರಳಿ ಅಭಿಮಾನಿಗಳ ಜೊತೆ ಹಬ್ಬ ಮಾಡಿಕೊಂಡಿದ್ದಾರೆ.
ಚಿತ್ರ ಪೈರಸಿ ಹಾವಳಿಯ ನಡುವೆಯೂ ಶತದಿನ ದಾಖಲಿಸಿ ಮುನ್ನುಗ್ಗುತ್ತಿರುವುದು ಚಿತ್ರರಂಗದ ಸಂಭ್ರಮ ಹೆಚ್ಚಿಸಿದೆ. ಚಿತ್ರರಂಗಕ್ಕೆ ಇಂಥಾದ್ದೊಂದು ಸಂಭ್ರಮ ಬೇಕಿತ್ತು.