ಕನ್ನಡದಲ್ಲಿ ಮಲ್ಟಿಸ್ಟಾರ್ಗಳ ಚಿತ್ರಗಳ ಪರ್ವ ಮತ್ತೊಮ್ಮೆ ಶುರುವಾಗಿದೆ. ಶಿವಣ್ಣ-ಸುದೀಪ್ ಅಭಿನಯದ ವಿಲನ್ ಚಿತ್ರ ಭರ್ಜರಿ ನಿರೀಕ್ಷೆ ಹುಟ್ಟಿಸಿರುವಾಗಲೇ ಇನ್ನೊಂದು ಮಲ್ಟಿಸ್ಟಾರ್ ಚಿತ್ರದ ಕನಸು ಚಿಗುರೊಡೆದಿದೆ. ಹೀಗೆ ಒಂದಾಗುವ ಸುಳಿವು ನೀಡಿರುವುದು ಗೋಲ್ಡನ್ ಸ್ಟಾರ್ ಗಣೇಶ್ ಮತ್ತು ದುನಿಯಾ ವಿಜಿ.
ಇಬ್ಬರೂ ಚಿತ್ರರಂಗದಲ್ಲಿ ದಾಖಲೆ ಬರೆದವರೇ. ಮುಂಗಾರು ಮಳೆ ಹಿಟ್ ಆದ ಹೊತ್ತಿನಲ್ಲೇ ದುನಿಯಾ ವಿಜಿ ಟ್ರೆಂಡ್ ಸೆಟ್ ಮಾಡಿತ್ತು. ಎಲ್ಲಕ್ಕೂ ಮಿಗಿಲಾಗಿ ಇಬ್ಬರು ಭಟ್ಟರ ಕ್ಯಾಂಪಿನ ಹುಡುಗರು.
ಈಗ ಯೋಗರಾಜ್ ಭಟ್ ನಿರ್ದೇಶನದಲ್ಲಿ ಮುಗುಳುನಗೆ ಚಿತ್ರ ಸಿದ್ಧವಾಗುತ್ತಿರುವಾಗಲೇ, ಹೊಸ ಸುದ್ದಿಯೊಂದು ಭಟ್ಟರ ಕ್ಯಾಂಪಿನಿಂದ ಬಂದಿದೆ. 20 ವರ್ಷಗಳಿಂದ ಗೆಳೆಯರಾಗಿರುವ ಗಣೇಶ್ ಮತ್ತು ದುನಿಯಾ ವಿಜಿ ಒಟ್ಟಿಗೇ ಸಿನಿಮಾ ಮಾಡ್ತಾರಂತೆ. ಐಡಿಯಾ ಬಂದ ತಕ್ಷಣ, ಆ ಚಿತ್ರಕ್ಕೆ ಭಟ್ಟರೇ ನಿರ್ದೇಶನ ಮಾಡಿದರೆ ಚೆಂದ ಅನ್ನೋದೂ ಹೊಳೆದಿದೆ.
ಕಥೆ ಏನು..? ಯಾವಾಗ..? ಊಹೂಂ..ಯಾವುದೂ ಗೊತ್ತಿಲ್ಲ. ಸದ್ಯಕ್ಕೆ ಇದು ಐಡಿಯಾ ಅಷ್ಟೆ. ಎಲ್ಲ ಗೊತ್ತಾಗೋಕೆ ಆ ಅಪೂರ್ವ ಸಂಗಮ ಆಗುವವರೆಗೆ ಕಾಯಬೇಕಷ್ಟೆ.