ಹಂಸಲೇಖ ಎನ್ನುವುದು ಸಂಗೀತಗಾರನ ಹೆಸರಷ್ಟೇ ಅಲ್ಲ. ಆತ ಒಬ್ಬ ಗಾನಮಾಂತ್ರಿಕ. ಹಂಸಲೇಖಗೆ ಸಂಗೀತ ಗೊತ್ತು. ಸಾಹಿತ್ಯ ಗೊತ್ತು. ಆತ ಅನುಭಾವಿ. ಆತ ತುಂಟ. ತತ್ವಪದಗಳು ಗೊತ್ತು. ಇಂಗ್ಲಿಷ್ನ್ನು ಕಂಗ್ಲಿಷನ್ನಾಗಿಸುವ ಕಲೆಯೂ ಗೊತ್ತು. ಶೃಂಗಾರ ರಸದಲ್ಲಿ ಹಂಸಲೇಖಗೆ ಸಾಟಿಯೇ ಇಲ್ಲ. ಅವರಷ್ಟು ಪೋಲಿ ಇನ್ನೊಬ್ಬರಿಲ್ಲ.
‘‘ಬಂತು ಬಂತು ಕರೆಂಟು ಬಂತು..’’ ಅನ್ನೋ ಕ್ಯಾಬರೆ ಹಾಡು ಬರೆದ ಅದೇ ಹಂಸಲೇಖ ‘‘ನೀಡು ಶಿವ ನೀಡದಿರು ಶಿವ.. ಹಾಡಿನಲ್ಲಿ ‘ಶೃಂಗಾರ ಕೃತಕ ಬಂಗಾರ ಕ್ಷಣಿಕ..ಬಾಳಲ್ಲಿ ಬಡಿವಾರವೇಕೆ?.. ನೀನಿತ್ತ ಕಾಯ...ನಿನ್ನ ಕೈಲಿ ಮಾಯ..ಆಗೋದು ಹೋಗೋದು ನಾ ಕಾಣೆನೆ ಎಂದು ಬರೆಯುತ್ತಾರೆ.
ಕೇಳುಗ ಮೋಡಿಗೊಳಗಾಗುವುದೇ ಅಲ್ಲ. ಕ್ಯಾಬರೆ ಹಾಡಿನಲ್ಲಿ (ಈಗಿನ ಐಟಂ ಸಾಂಗ್ ಎಂದುಕೊಳ್ಳಿ) ಜಾತಿ ಜಾತಿ ಸೇರಲ್ಲ..ಭಾಷೆ ಭಾಷೆ ಬೆರೆಯಲ್ಲ..ಹುಡುಗಿ ಅಂದ್ರೆ ಮಂದಿ, ಜಾತಿ ಗೀತಿ ಚಿಂದಿ ಅಂತಾ ಬರೆಯೋ ತಾಕತ್ತಿರೋದು ಹಂಸಲೇಖಗೆ ಮಾತ್ರ. ತಂಗಿ ನಿನ್ನ ಮಗುವಿನಲ್ಲೂ ಒಂದು ನಗುವಿದೆ..ಆ ನಗುವು ನಮ್ಮ ಅಮ್ಮನಂತಿದೆ. ಎನ್ನುವಾಗಲೇ ತಂಗಿಯನ್ನೂ, ತಾಯಿಯನ್ನೂ ಏಕ ಮಾಡಿಬಿಡುತ್ತಾರೆ ಹಂಸಲೇಖ.
ನೀನಾ ಭಗವಂತ..ಜಗಕುಪಕರಿಸಿ, ನಮಗಪಕರಿಸುವ ಜಗದೋದ್ಧಾರಕ ನೀನೇನಾ..ಎಂದು ಬರೆದೇ ಚಿತ್ರಂಗಕ್ಕೆ ಬಂದ ಹಂಸಲೇಖ, ಮತ್ತೆ ಆ ಹಾಡು ನೆನಪಿಸುವುದು ಮಂಜುನಾಥ ಚಿತ್ರದ ಶಿವನನ್ನು ಬಯ್ಯುವ ಹಾಡಿನಲ್ಲಿ. ಯಾರೋ ಹೆತ್ತೋರ್ ನಿನ್ನ..ಅವರ ಬಾಯಿಗ್ ಹಾಕ್ತಿನ್ ಮಣ್ಣಾ ಎಂದು ಬರೆದಾಗ.
ಅವರ ಹಾಡುಗಳಲ್ಲಿ ಏನುಂಟು ಎನ್ನುವುದಕ್ಕಿಂತ ಏನಿಲ್ಲ ಎಂದು ಕೇಳುವುದೇ ಸರಿ. ಅವರು ಒಗಟುಗಳನ್ನೂ ಹಾಡಾಗಿಸಿದ್ದಾರೆ. ನುಡಿಗಟ್ಟು, ವ್ಯಾಕರಣ, ಗಣಿತವನ್ನೂ ಹಾಡಲ್ಲಿ ತಂದಿದ್ದಾರೆ.
ಅವರು ಎಂತೆಂಥಾ ಸನ್ನಿವೇಶಕ್ಕೆಲ್ಲ ಹಾಡು ಸೃಷ್ಟಿಸಿದ್ದಾರೆ ಎನ್ನುವುದನ್ನು ನೋಡಿದರೆ ಸಾಕು, ಹಂಸಲೇಖ ತಾಕತ್ತು ಅರ್ಥವಾಗಿಬಿಡುತ್ತೆ. ಹೀರೋಯಿನ್ ಚುಡಾಯಿಸುವುದಕ್ಕೆ (ಶಾಂತಿ ಕ್ರಾಂತಿ - ಮಧ್ಯರಾತ್ರೀಲಿ) ಕಿಡ್ನಾಪ್ ಮಾಡುವುದುಕ್ಕೆ ( ರಣಧೀರ - ಮೀನಾಕ್ಷಿ ನಿನ್ನ ಕಣ್ಣ ಮೇಲೆ) ಕೋಳಿ ಹಿಡಿಯೋಕೆ (ಸಿಪಾಯಿ - ಕೊಕ್ಕೋ ಕೋಳಿಯೇ..) ನೀರು ಕೇಳೋಕೆ (ಕಿಂದರಿ ಜೋಗಿ - ಗಂಗೆ ಬಾರೆ..) ಮನಸ್ಸು ಬದಲಾಗಿದೆ ಅನ್ನೋದಕ್ಕೆ (ಕೌರವ - ಕುಕ್ಕುಕ್ಕೂ..) ಪ್ರೇಯಸಿಗೆ ಸೀರೆ ಕೊಡೋಕೆ ( ರಣರಂಗ - ಗಾಜನೂರಿನ ಗಂಡು ಕಾಣಮ್ಮೋ) ಹೀಗೆ ಹಾಡೊಂದು ಹಾಡಿದರೆ ಅದು ಚಿರಕಾಲ ಕೇಳಬೇಕು ಎಂದೇ ಹಾಡು ಬರೆದವರು ಹಂಸಲೇಖ.
ಕಾವೇರಿಗಾಗಿ ಬರೆದ ಕಾವೇರಮ್ಮ..ಕಾಪಾಡಮ್ಮ, ಕನ್ನಡ ನಾಡಿನ ಜೀವನದಿ ಕಾವೇರಿ..ಹಂಸಲೇಖ ಗೀತೆಯಾಗಿ ಉಳಿದಿಲ್ಲ. ಕಾವೇರಿ ಗೀತೆಯಾಗಿವೆ ಎಂಬುದರಲ್ಲೇ ಹಂಸಲೇಖ ಸಾಧನೆಯಿದೆ. ಮಂಡ್ಯದ ಗಂಡು ಹಾಡು, ಅಂಬರೀಷ್ ಜೀವನಗೀತೆಯಾಗಿದೆ. ಹುಟ್ಟಿದರೆ ಕನ್ನಡ ನಾಡಲ್ ಹುಟ್ಟಬೇಕು ನಾಡಗೀತೆಯಾಗಿದೆ..ಪ್ರೇಮಗೀತೆಗಳು ಅದೆಷ್ಟೋ ಲೆಕ್ಕವೇ ಇಲ್ಲ.
ಈ ಜಗವೇ ತಾಯಿಗೇ ತೊಟ್ಟಿಲು..ನಾವೆಲ್ಲ ಮಕ್ಕಳೂ ಎಂದು ಬರೆದ ಹಂಸಲೇಖ, ಸಾಹಿತ್ಯದ ದಾರದಲ್ಲೇ ಪೋಣಿಸಿದ ಮುತ್ತಿನ ಹಾರ ಎಂದರೆ ತಪ್ಪೇನಲ್ಲ. ಎಷ್ಟು ಜನ ಕುಳಿತರೂ ಇನ್ನೊಬ್ಬರು ಕೂರಲು ಜಾಗವಿದ್ದ ಪುಷ್ಪಕ ವಿಮಾನದಂತೆ, ಹಂಸಲೇಖ ಸಾಹಿತ್ಯ ಬರಿದಾಗುವುದಿಲ್ಲ. ಅವರಿಗೀಗ 65ರ ಹುಟ್ಟುಹಬ್ಬದ ಸಂಭ್ರಮ.
ಕರೆಯೋಣ..ಮತ್ತೆ ಮತ್ತೆ..ಹಂಸವೇ..ಹಂಸವೇ..ಹಾಡು..ಬಾ.. ಸೃಷ್ಟಿಯ ಸಂಭ್ರಮ ನೋಡು ಬಾ..
Related Articles :-