ಜಿಎಸ್‍ಟಿ ಜಾರಿಯಾಗುತ್ತಿದೆ. ವಿಳಂಬವೇ ಇಲ್ಲ. ಇದೇ ಜುಲೈನಿಂದ ಎಲ್ಲರೂ ಹಿಂದಿನ ತೆರಿಗೆ ಪದ್ಧತಿ ಬಿಟ್ಟು, ಜಿಎಸ್‍ಟಿ ವ್ಯಾಪ್ತಿಗೆ ಬರುತ್ತಾರೆ. ಚಿತ್ರರಂಗ ಕೂಡಾ. ಜಿಎಸ್‍ಟಿ ಜಾರಿ ಕುರಿತಂತೆ ಸರ್ಕಾರ ಎಷ್ಟೇ ಜಾಹೀರಾತು ನಿಡುತ್ತಿದ್ದರೂ, ಅದು ಹಲವರಿಗೆ ಅರ್ಥವಾಗಿಲ್ಲ. ಚಿತ್ರರಂಗದವರಲ್ಲಿ ಆತಂಕವೇ ಹೆಚ್ಚಿದೆ. ಕಾರಣ, ಶೇ.28ರಷ್ಟು ತೆರಿಗೆ.
ಈ ಮೊದಲು ಇದ್ದ ತೆರಿಗೆ ವ್ಯವಸ್ಥೆಯಲ್ಲಿ ಕನ್ನಡ ಚಿತ್ರಗಳಿಗೆ ತೆರಿಗೆ ವಿನಾಯಿತಿ ಇತ್ತು. ಆದರೆ, ಜಿಎಸ್‍ಟಿ ಜಾರಿಗೆ ಬಂದರೆ, ರಾಜ್ಯಕ್ಕೆ ಯಾವ ಅಧಿಕಾರವೂ ಇರುವುದಿಲ್ಲ. ಆಗ ಕನ್ನಡವೇ ಆಗಲಿ, ಪರಭಾಷೆ ಚಿತ್ರಗಳೇ ಆಗಲಿ, ಶೇ.28ರಷ್ಟು ತೆರಿಗೆ ಕಟ್ಟಲೇಬೇಕು. ಅದರ ನೇರ ಹೊರೆ ಬೀಳುವುದು ಚಿತ್ರ ನಿರ್ಮಾಪಕರ ಮೇಲೆ.
ಇನ್ನು ಸಿನಿಮಾ ಟಿಕೆಟ್ ಬೆಲೆ 100 ರೂ.ಗಿಂತ ಕಡಿಮೆ ಇದ್ದರೆ, ಅದಕ್ಕೆ ಶೇ.18ರಷ್ಟು ತೆರಿಗೆ ಬೀಳಲಿದೆ. 100 ರೂ.ಗಿಂತ ಹೆಚ್ಚಿನ ದರದ ಟಿಕೆಟ್‍ಗೆ ಶೇ.28ರಷ್ಟು ತೆರಿಗೆ ಬೀಳಲಿದೆ.
ಇದೆಲ್ಲದರ ಮಧ್ಯೆ ರಾಜ್ಯ ಸರ್ಕಾರ ಮಲ್ಟಿಪ್ಲೆಕ್ಸ್‍ಗಳಲ್ಲಿ 200ರೂ. ಗರಿಷ್ಠ ಮಿತಿ ಟಿಕೆಟ್ ನೀತಿ ಜಾರಿ ಮಾಡಿದೆ. ಹೀಗಿದ್ದರೂ ಜಿಎಸ್‍ಟಿ ಜಾರಿ ನಂತರ ಟಿಕೆಟ್ ದರ ಹೆಚ್ಚಾಗುವುದಿಲ್ಲ ಎಂದಿದ್ದಾರೆ ಸಿಎಂ ಸಿದ್ದರಾಮಯ್ಯ.
ಜಿಎಸ್‍ಟಿ ಜಾರಿ ಕುರಿತು ಚಿತ್ರರಂಗದವರಿಗೆ ಕಾಡುತ್ತಿರುವ ಆತಂಕಗಳ ಬಗ್ಗೆ ಫಿಲ್ಮ್ ಚೇಂಬರ್ ಅಧ್ಯಕ್ಷ ಸಾ.ರಾ. ಗೋವಿಂದು ಸೇರಿದಂತೆ ಹಲವರ ಜೊತೆ ಮಾತುಕತೆ ನಡೆಯುತ್ತಿದೆ ಎಂದಿದ್ದಾರೆ ಸಿದ್ದರಾಮಯ್ಯ. ತೆರಿಗೆಯನ್ನು ಕಡಿಮೆ ಮಾಡಲು ಸಾಧ್ಯವಿಲ್ಲ. ಏಕೆಂದರೆ, ಅದು ಈಗ ರಾಜ್ಯ ಸರ್ಕಾರದ ಕೈಯ್ಯಲ್ಲಿ ಇಲ್ಲ. ಹಾಗೆಂದು ಕೈಚೆಲ್ಲಿಯೂ ಕೂರುವ ಹಾಗಿಲ್ಲ. ಹಾಗಾದರೆ ಮುಂದೇನು ಮಾಡಬೇಕು.
ವಿಧಾನಪರಿಷತ್‍ನಲ್ಲಿ ಜಿಎಸ್‍ಟಿ ಮಸೂದೆ ಮಂಡಿಸಿದ ಸಿದ್ದರಾಮಯ್ಯ, ಚಿತ್ರರಂಗದ ಸಮಸ್ಯೆಗಳ ಕುರಿತು ಫಿಲ್ಮ್ ಚೇಂಬರ್ ಎತ್ತಿರುವ ಆತಂಕಗಳ ಬಗ್ಗೆ ಗಮನಕ್ಕೆ ತಂದರು. ಚಿತ್ರರಂಗದ ನೆರವಿಗೆ ಸಬ್ಸಿಡಿ ನೀಡುವ ಅಥವಾ ತೆರಿಗೆ ಹೊರೆಯನ್ನು ಕಡಿಮೆ ಮಾಡುವ ಕುರಿತು ಸುಳಿವು ನೀಡಿದರು. ಸದನದ ಎಲ್ಲರೂ ಈ ಕುರಿತು ಬೆಂಬಲಿಸಬೇಕು ಎಂದು ಮನವಿಯನ್ನೂ ಮಾಡಿದರು.
ಮೂಲಗಳ ಪ್ರಕಾರ ಜಿಎಸ್‍ಟಿ ಜಾರಿ ನಂತರ ಕನ್ನಡ ಚಿತ್ರಗಳಿಗೆ ತೆರಿಗೆ ವಿನಾಯಿತಿ ಸೌಲಭ್ಯ ಸಂಪೂರ್ಣ ನಿಲ್ಲಬಹುದು. ಆದರೆ, ತೆರಿಗೆಯ ಹೊರೆ ಶೇ.6ರ ಗಡಿ ದಾಟುವುದಿಲ್ಲ ಎಂಬ ನಿರೀಕ್ಷೆಯ ಇದೆ. ಈ ಕುರಿತಂತೆ ಸಿದ್ದರಾಮಯ್ಯ, ಸರ್ಕಾರದ ಅಧಿಕಾರಿಗಳು ಫಿಲ್ಮ್ ಚೇಂಬರ್ ಜೊತೆ ನಿರಂತರ ಸಂಪರ್ಕದಲ್ಲಿದ್ದಾರೆ.
ಹಾಗೇನಾದರೂ ಆದರೆ, ಚಿತ್ರ ನಿರ್ಮಾಪಕರು ಮತ್ತು ಪ್ರೇಕ್ಷಕರು ಎಲ್ಲರೂ ಖುಷಿಯಾಗಿ ಸಿನಿಮಾ ಮಾಡಬಹುದು ಮತ್ತು ನೋಡಬಹುದು.