` ಆವಂತಿಕಾ ಶೆಟ್ಟಿಯ ಲಾಡು, ದ್ರಾಕ್ಷಿ, ಗೋಡಂಬಿ ಸ್ಟೋರಿ - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
avantika shetty image
avanthika shetty image

‘ರಾಜು ಕನ್ನಡ ಮೀಡಿಯಂ’ ಚಿತ್ರದ ವಿವಾದ ಒಂದು ಕಡೆ ಫಿಲ್ಮ್ ಚೇಂಬರ್​ ಮತ್ತೊಂದು ಕಡೆ ಕೋರ್ಟ್​ನಲ್ಲಿ ಸದ್ದು ಮಾಡುತ್ತಿದೆ. ನಟಿ ಆವಂತಿಕಾ ಶೆಟ್ಟಿ ಮತ್ತು ನಿರ್ಮಾಪಕರ ಸುರೇಶ್ ಇಬ್ಬರೂ ಎರಡೂ ಕಡೆ ನ್ಯಾಯ ಕೇಳುತ್ತಿದ್ದಾರೆ. 

ನಟಿ ಆವಂತಿಕಾ ಶೆಟ್ಟಿ ವಿರುದ್ಧ ಫಿಲ್ಮ್ ಚೇಂಬರ್​ಗೆ ದೂರು ಕೊಟ್ಟಿರುವ ನಿರ್ಮಾಪಕ ಸುರೇಶ್​ ಜೊತೆ ಇಡೀ ಚಿತ್ರತಂಡವಿದೆ. ಆ ದೂರಿನ ಪ್ರತಿಯಲ್ಲಿ ನಿರ್ಮಾಪಕರು ನಟಿ ಆವಂತಿಕಾ ಶೆಟ್ಟಿಯವರ ಆರೋಪಗಳಿಗೆಲ್ಲ ಉತ್ತರ ಕೊಡುತ್ತಲೇ ಹೇಳಿರುವ ವಿಷಯಗಳು ಎಲ್ಲರ ಹುಬ್ಬೇರಿಸುತ್ತಿವೆ. ಅದರಲ್ಲಿ ಒಂದು ದ್ರಾಕ್ಷಿ, ಗೋಡಂಬಿ ವಿಚಾರ.

ನಟಿ ಆವಂತಿಕಾ ಶೆಟ್ಟಿಯವರಿಗೆ ಗೋಲ್ಡ್​ಫಿಂಚ್ ಹೋಟೆಲ್​ನಲ್ಲಿ ರೂಂ ಬುಕ್ ಮಾಡಲಾಗಿತ್ತು. ಅಲ್ಲಿ ತನ್ನ ರೂಂನಲ್ಲಿದ್ದ ಲಾಡು, ದ್ರಾಕ್ಷಿ, ಗೋಡಂಬಿಯನ್ನ ಯಾರೋ ಕದ್ದಿದ್ದಾರೆ ಅಂತಾ ಆವಂತಿಕಾ ಶೆಟ್ಟಿ ಗಲಾಟೆ ಮಾಡಿದ್ದರಂತೆ. 

ಇನ್ನು ತುಂಡುಬಟ್ಟೆ ಹಾಕೋಕೆ ಹೇಳಿದರು ಅನ್ನೋದಕ್ಕೆ ನಿರ್ಮಾಪಕರು ಕೊಟ್ಟಿರುವ ದೂರಿನಲ್ಲೇ ಉತ್ತರಾನೂ ಇದೆ. ತಮ್ಮ ಕಾಸ್ಟ್ಯೂಮ್ ಸೆಲೆಕ್ಷನ್ ಮತ್ತು ಡಿಸೈನ್, ಎರಡರ ಜವಾಬ್ದಾರಿಯನ್ನೂ ಹೊತ್ತುಕೊಂಡಿದ್ದವರು ಸ್ವತಃ ಆವಂತಿಕಾ ಶೆಟ್ಟಿ.

ಆವಂತಿಕಾ ಶೆಟ್ಟಿ ಶೂಟಿಂಗ್ ವೇಳೆಯಲ್ಲಿ ಇಷ್ಟೆಲ್ಲ ಸತಾಯಿಸಿದ್ದಾರೆ. ಅವರ ಸಹವಾಸ ಬೇಡ. ಆಕೆಯನ್ನು ಚಿತ್ರರಂಗದಿಂದಲೇ ಹೊರಹಾಕಿ ಅನ್ನೋದು ನಿರ್ಮಾಪಕರ ಬೇಡಿಕೆಯಾದರೆ, ನನ್ನ ಪಾತ್ರಕ್ಕೆ ನಾನೇ ಡಬ್ಬಿಂಗ್ ಮಾಡಬೇಕು. ಬೇರೆಯವರು ಡಬ್ಬಿಂಗ್ ಮಾಡೋದಾದ್ರೆ ನನ್ನ ಅಭಿನಯದ ದೃಶ್ಯಗಳನ್ನೇ ಬಳಸಬೇಡಿ ಅನ್ನೋ ವಾದ ಮುಂದಿಟ್ಟಿದ್ದಾರೆ ನಟಿ ಆವಂತಿಕಾ ಶೆಟ್ಟಿ.

ಈಗ ಮೊದಲು ಜಡ್ಜ್​ಮೆಂಟ್ ಕೊಡಬೇಕಾದ ಹೊಣೆ ಇರುವುದು ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷರಾದ ಸಾ.ರಾ. ಗೋವಿಂದು ಅವರಿಗೆ. ಸಿನಿಮಾವೊಂದರ ಶೂಟಿಂಗ್ ಒಂದು ದಿನ ವೇಸ್ಟ್ ಆದರೆ, ನಿರ್ಮಾಪಕರಿಗೆ ಎಷ್ಟು ಲಾಸ್ ಆಗುತ್ತೆ  ಅನ್ನೋದು ಸ್ವತಃ ನಿರ್ಮಾಪಕರೂ ಆಗಿರುವ ಸಾ.ರಾ. ಗೋವಿಂದುಗೆ ಗೊತ್ತು. ಹಾಗೆಂದು ಕಲಾವಿದೆಯೊಬ್ಬರ ದೂರನ್ನು ಕೇಳದೇ ಇರಲು ಸಾಧ್ಯವೇ ಇಲ್ಲ. ಏಕೆಂದರೆ, ಅವರು ಕುಳಿತಿರುವ ಪೀಠ ಅಂಥಾದ್ದು. 

ಚಿತ್ರರಂಗದ ಹಲವು ಸಮಸ್ಯೆಗಳನ್ನು ಸರಾಗವಾಗಿ ಬಗೆಹರಿಸಿರುವ ಸಾ.ರಾ.ಗೋವಿಂದು ಈ ಸಮಸ್ಯೆಯನ್ನು ಹೇಗೆ ಬಗೆಹರಿಸ್ತಾರೋ ನೋಡಬೇಕು.