ಇನ್ಫೋಸಿಸ್ ಸಂಸ್ಥೆಯ ಸುಧಾಮೂರ್ತಿ ಕೋವಿಡ್ 19 ವಿರುದ್ಧದ ಹೋರಾಟದಲ್ಲಿ ಎಂದಿನಂತೆ ನೆರವಿನ ಹಸ್ತ ಚಾಚಿದ್ದಾರೆ. ಚಿತ್ರರಂಗದ ಕಾರ್ಮಿಕರ ನೆರವಿಗೂ ಕೈಜೋಡಿಸಿದ್ದಾರೆ. ಸುಧಾಮೂರ್ತಿ ಅವರ ಇನ್ಫೋಸಿಸ್ ಫೌಂಡೇಷನ್, ಚಿತ್ರರಂಗದ ಸುಮಾರು 18 ಕಾರ್ಮಿಕ ಸಂಘಟನೆಗಳ ಸದಸ್ಯರಿಗೆ ಆಹಾರ ಸಾಮಗ್ರಿ ವಿತರಿಸುತ್ತಿದೆ. ಬನಶಂಕರಿಯಲ್ಲಿ ಈ ಕೆಲಸಕ್ಕೆ ಚಾಲನೆಯೂ ಸಿಕ್ಕಿದೆ. ಮೊದಲ ಹಂತದಲ್ಲಿ 2000 ಕಿಟ್ ವಿತರಿಸಲಾಗಿದೆ.
ಗಾಳಿಪಟ 2 ನಿರ್ಮಾಪಕ ರಮೇಶ್ ರೆಡ್ಡಿ ಅವರ ಒಂದು ಮೆಸೇಜ್ ಮತ್ತು ಒಂದು ಫೋನ್‍ಕಾಲ್ ಇಷ್ಟೆಲ್ಲ ಕೆಲಸ ಮಾಡಿಸಿದೆ. ಹಲವೆಡೆ ಕಾರ್ಮಿಕರಿಗೆ ನೆರವು ನೀಡುತ್ತಿರುವ ರಮೇಶ್ ರೆಡ್ಡಿ, ಕಾರ್ಮಿಕರ ದೊಡ್ಡ ಸಂಖ್ಯೆ ನೋಡಿ ಇನ್ನೂ ಹೆಚ್ಚಿನ ಶಕ್ತಿ ಬೇಕು ಎಂದು ತೀರ್ಮಾನಿಸಿ ಸುಧಾಮೂರ್ತಿಯವರಿಗೆ ಒಂದು ಮೆಸೇಜ್ ಮಾಡಿದ್ದಾರೆ.
ಆ ಮೆಸೇಜ್ ನೋಡಿದ ಸುಧಾಮೂರ್ತಿಯವರು ನನಗೆ ಕರೆ ಮಾಡಿದರು. ಕಾರ್ಮಿಕರ ಪಟ್ಟಿ ಕಳಿಸುವಂತೆ ಕೋರಿದರು. ತಕ್ಷಣ ಚೇಂಬರ್‍ಗೆ ಮಾಹಿತಿ ನೀಡಿದೆ. ಸಾ.ರಾ.ಗೋವಿಂದು ಅವರ ನೆರವಿನೊಂದಿಗೆ 3 ಸಾವಿರ ಕಾರ್ಮಿಕರ ಪಟ್ಟಿ ಕಳಿಸಿಕೊಟ್ಟೆ ಎಂದು ತಿಳಿಸಿದ್ದಾರೆ ರಮೇಶ್ ರೆಡ್ಡಿ.
ಕಾರ್ಮಿಕರಿಗೆ ಕಿಟ್ ವಿತರಣೆಗೆ ನೆರವಾದ ಸುಧಾಮೂರ್ತಿಯವರಿಗೆ ಸಾ.ರಾ.ಗೋವಿಂದು ಧನ್ಯವಾದ ಅರ್ಪಿಸಿದ್ದಾರೆ. ಮೊದಲ ಹಂತದ ಕಿಟ್ ವಿತರಣೆ ವೇಳೆ ಸಾ.ರಾ.ಗೋವಿಂದು, ಚಿತ್ರಲೋಕದ ಕೆ.ಎಂ. ವೀರೇಶ್ ಸಹ ಹಾಜರಿದ್ದರು.