ಸುಖದೇವ್ ನಿಧನರಾದರು ಎಂಬ ಸುದ್ದಿ ಕಿವಿಗೆ ಬಿದ್ದ ಕೂಡಲೇ, ನೆನಪಾಗುವ ಹಾಡು ಇದು. ಸಿರಿವಂತನಾದರೂ ಕನ್ನಡ ನಾಡಲ್ಲೆ ಮೆರೆವೆ ಎಂಬ ಆ ಐತಿಹಾಸಿಕ ಗೀತೆ. ಆ ಹಾಡಿನ ಹಿಂದಿನ ಸಂಗೀತ ಮಾಂತ್ರಿಕ ಸುಖದೇವ್.
ಸುಖದೇವ್ ಅವರ ತಂದೆ ಕೆ.ಎಂ. ಪುಟ್ಟಸ್ವಾಮಿ ಮತ್ತು ತಾಯಿ ಬಳೆ ಲಿಂಗಮ್ಮ ಸ್ವಾತಂತ್ರ್ಯ ಹೋರಾಟಗಾರರಾಗಿದ್ದವರು. ಭಗತ್ ಸಿಂಗ್, ರಾಜ್‍ಗುರು, ಸುಖದೇವ್ ಎಂದರೆ ಅದೇನೋ ಪ್ರೀತಿ. ಹೀಗಾಗಿಯೇ ತಮ್ಮ ಮಗನಿಗೆ ಸುಖದೇವ್ ಎಂದೇ ಹೆಸರಿಟ್ಟಿದ್ದರು. ಸ್ವಾತಂತ್ರ್ಯಾನಂತರ ತಂದೆ ಶಾಸಕರಾದರು. ತಾಯಿಯೂ ಜನಪ್ರತಿನಿಧಿಯಾದರು.
ಚಿಕ್ಕಬಳ್ಳಾಪುರದಲ್ಲಿ ಜನಿಸಿ ಸುಖದೇವ್‍ಗೆ ಪಿಯಾನೋ ಮೇಲೆ ವಿಪರೀತ ಎನ್ನುವಷ್ಟು ಹುಚ್ಚಿತ್ತು. ಕರ್ನಾಟಕ ಕಲಾ ಸಂಘದ ನಾಟಕಗಳಲ್ಲಿ ಸಂಗೀತ ನಿರ್ದೇಶನ ನೀಡುತ್ತಿದ್ದ ಸುಖದೇವ್, ಅಂಥಾದ್ದೊಂದು ನಾಟಕದಲ್ಲೇ ಶಿವಶಂಕರ್ ಕಣ್ಣಿಗೆ ಬಿದ್ದರು.
ಸಂಗಮ ಚಿತ್ರಕ್ಕೆ ಸಂಗೀತ ನಿರ್ದೇಶಕರನ್ನು ಹುಡುಕುತ್ತಿದ್ದ ಶಿವಶಂಕರ್‍ಗೆ ಸುಖದೇವ್ ಹಿಡಿಸಿದರು. ಆಗ ಸೃಷ್ಟಿಯಾಗಿದ್ದೇ ಸಿರಿವಂತನಾದರೂ.. ಕನ್ನಡ ನಾಡಲ್ಲೇ ಮೆರೆವೆ.. ಹಾಡು. ರಾಜೇಶ್, ಭಾರತಿ ನಟಿಸಬೇಕಿದ್ದ ಆ ಚಿತ್ರ ಸಿದ್ಧವಾಗಲೇ ಇಲ್ಲ. ಹಾಡಂತೂ ಸೂಪರ್ ಹಿಟ್ ಆಗಿ ಹೋಯ್ತು. ಆ ಹಾಡು ಹಾಡಿಯೇ ಕಲ್ಬುರ್ಗಿಂiÀಲ್ಲಿ ಆರ್ಕೆಸ್ಟ್ರಾ ಗಾಯಕನೊಬ್ಬ ಮನೆ ಕಟ್ಟಿಸಿ, ಮನೆಗೆ ಸಿರಿವಂತ ಎಂದು ಹೆಸರಿಟ್ಟನಂತೆ. ಆದರೆ, ಆ ಸಿರಿ ಸುಖದೇವ್‍ಗೆ ಒಲಿಯಲೇ ಇಲ್ಲ. ಕೊನೆಯವರೆಗೂ ಬಡತನದೊಂದಿಗೆ ಗುದ್ದಾಡುತ್ತಲೇ ಇದ್ದವರು ಸುಖದೇವ್.
ಆದರೆ, ಆ ಸಿರಿವಂತನ ಹಾಡು ಸಂಘರ್ಷ ಚಿತ್ರಕ್ಕೆ ಸಂಗೀತ ನೀಡುವ ಅವಕಾಶ ನೀಡಿತು. ಆಗ ಸೃಷ್ಟಿಯಾಗಿದ್ದೇ ಇನ್ನೊಂದು ಅದ್ಭುತ ಸಂಗೀತ. ಯೌವನದಾ ಹೊಳೆಯಲಿ ಈಜಾಟ ಆಡಿದರೆ..ಅನ್ನೋ ಹಾಡು. ಅಮರ ಗೀತೆಗಳನ್ನು ನೀಡಿ ಕನ್ನಡಿಗರ ಹೃದಯ ತಂಪಾಗಿಸಿದ ನಿರ್ದೇಶಕ ಸುಖದೇವ್‍ಗೆ ಹೆಸರಿನಲ್ಲಿದ್ದ ಸುಖ, ಕೊನೆಯವರೆಗೂ ಸಿಗಲೇ ಇಲ್ಲ.