` ಮೀಡಿಯಾ ಬ್ಯಾನ್ : ಸರೋಜಾದೇವಿಯಿಂದ ಅಮಿತಾಬ್ ಬಚ್ಚನ್..ವರೆಗೆ.. ಯಾರೆಲ್ಲ ಬ್ಯಾನ್ ಆಗಿದ್ದರು? - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
ಮೀಡಿಯಾ ಬ್ಯಾನ್ : ಸರೋಜಾದೇವಿಯಿಂದ ಅಮಿತಾಬ್ ಬಚ್ಚನ್..ವರೆಗೆ.. ಯಾರೆಲ್ಲ ಬ್ಯಾನ್ ಆಗಿದ್ದರು?
Darshan, Saroja Devi, Amitab Bachchan Image

ನಟ ದರ್ಶನ್ ಪ್ರಕರಣ ಸುಖಾಂತ್ಯವನ್ನೇನೋ ಕಂಡಿದೆ. ಈ ಎರಡು ವರ್ಷಗಳಲ್ಲಿ ದರ್ಶನ್ ಅವರ ಒಂದು ಸುದ್ದಿಯಾಗಲೀ, ಜಾಹೀರಾತಾಗಲೀ.. ಹಾಡು, ದೃಶ್ಯಗಳಾಗಲೀ ಪ್ರಸಾರವಾಗಿರಲಿಲ್ಲ. ಮತ್ತಿನ್ನು ಮೇಲೆ ದರ್ಶನ್ ಅವರ ಸಿನಿಮಾಗಳ ಸುದ್ದಿ, ಜಾಹೀರಾತು, ಹಾಡು, ದೃಶ್ಯಗಳೂ ಟಿವಿ ನ್ಯೂಸ್ ಚಾನೆಲ್ಲುಗಳಲ್ಲಿ ಪ್ರಸಾರವಾಗುತ್ತವೆ. ಆದರೆ ಮಾಧ್ಯಮಗಳಲ್ಲಿ ಈ ರೀತಿ ನಿಷೇಧವನ್ನೆದುರಿಸಿದವರ ಲಿಸ್ಟಿನಲ್ಲಿ ದರ್ಶನ್ ಮೊದಲಿಗರೇನಲ್ಲ. ಹಿಂದಿಯಲ್ಲಿ ಹಲವು ಕಲಾವಿದರು ಈ ಪರಿಸ್ಥಿತಿ ಎದುರಿಸಿದ್ದಾರೆ. ಆದರೆ ಕನ್ನಡದಲ್ಲಿ ಅಪರೂಪ.

1960ರಲ್ಲಿ ಬಿ.ಸರೋಜಾದೇವಿ ಬ್ಯಾನ್ ಆಗಿದ್ದರು :

ಈ ಹಿಂದೆ ಬಿ.ಸರೋಜಾದೇವಿಯವರನ್ನೂ ಇದೇ ರೀತಿ ಪತ್ರಕರ್ತರು ಬ್ಯಾನ್ ಮಾಡಿದ್ದರು. 1960ರಲ್ಲಿ ನಡೆದಿದ್ದ  ಘಟನೆ ಇದು. ಪತ್ರಕರ್ತರ ಬಗ್ಗೆ ಸರೋಜಾದೇವಿ ಆಡಿದ್ದರೆನ್ನಲಾದ ಕೆಲವು ಮಾತುಗಳಿಂದಾಗಿ ಪತ್ರಕರ್ತರು ಆಕ್ರೋಶಗೊಂಡಿದ್ದರು. ಸುಮಾರು 2 ವರ್ಷ ಕಾಲ ಸರೋಜಾದೇವಿಯವರ ಒಂದೇ ಒಂದು ಫೋಟೋ ಅಥವಾ ಸುದ್ದಿ ಕನ್ನಡ ಪತ್ರಿಕೆಗಳಲ್ಲಿ ಪ್ರಿಂಟ್ ಆಗಿರಲಿಲ್ಲ. ಅಷ್ಟೇ ಏಕೆ, ಸರೋಜಾದೇವಿ ನಟಿಸಿದ ಚಿತ್ರಗಳ ಸುದ್ದಿಯಲ್ಲಿ ಸರೋಜಾದೇವಿ ಹೆಸರನ್ನು ಬಿಟ್ಟು ಸುದ್ದಿ ಮಾಡುತ್ತಿದ್ದರು.

ನಂತರ ಕಿತ್ತೂರು ಚೆನ್ನಮ್ಮ ಸಿನಿಮಾ ಮಾಡುತ್ತಿದ್ದಾಗ ಬಿ.ಆರ್.ಪಂತುಲು ನೇತೃತ್ವ ವಹಿಸಿ.. ಕೆಲವು ಹಿರಿಯ ಪತ್ರಕರ್ತರು ಮಾತುಕತೆ ಮೂಲಕ ವಿವಾದ ಬಗೆಹರಿಸಿದ್ದರು. ಹಲವು ನಟ ನಟಿಯರ ವಿವಾದಗಳು ಬ್ಯಾನ್ ಹಂತಕ್ಕೆ ಹೋಗಿ, ಕಡೆಯ ಕ್ಷಣದಲ್ಲಿ ಸಂಧಾನ ನಡೆದು ವಿವಾದಗಳು ಬಗೆಹರಿದಿವೆ.

ಸಲ್ಮಾನ್ ಖಾನ್ ಹಲ್ಲೆ  ಪ್ರಕರಣ :

ಬಾಲಿವುಡ್`ನಲ್ಲಿ 2014ರಲ್ಲಿ ನಟ ಸಲ್ಮಾನ್ ಖಾನ್ ಬಾಡಿಗಾಡ್ರ್ಸ್, ಫೋಟೋಗ್ರಾಫರುಗಳ ಮೇಲೆ ಹಲ್ಲೆ ಮಾಡಿದ್ದರು. ಆಗ ಸಲ್ಮಾನ್ ಖಾನ್ ಅವರ ಫೋಟೋ ತೆಗೆಯುವುದನ್ನೇ ಫೋಟೋ ಜರ್ನಲಿಸ್ಟ್`ಗಳು ಬಹಿಷ್ಕರಿಸಿದ್ದರು. ಕೊನೆಗೆ ಸಲ್ಮಾನ್ ಖಾನ್ ಈ ರೀತಿ ಇನ್ನೊಮ್ಮೆ ನಡೆಯದಂತೆ ನೋಡಿಕೊಳ್ಳುವ ಭರವಸೆ ಕೊಟ್ಟು, ಕ್ಷಮೆ ಕೇಳಿದ್ದರು.

ಶ್ರದ್ಧಾ ಕಪೂರ್ ಅಹಂಕಾರ ಮೆರೆದಾಗ.. :

ನಟಿ ಶ್ರದ್ಧಾ ಕಪೂರ್ ಕೂಡಾ ಆಶಿಕಿ2 ಸಕ್ಸಸ್ ಮೀಟ್`ನಲ್ಲಿ ಅಹಂಕಾರ ಪ್ರದರ್ಶನ ಮಾಡಿದ್ದರು. ಆಕೆ ಕ್ಷಮೆ ಕೇಳದಿದ್ದರೂ, ಆಕೆಯ ತಂದೆ ಶಕ್ತಿ ಕಪೂರ್ ಅವರು ಸಾರಿ ಕೇಳಿದ್ದರು. ಶಕ್ತಿ ಕಪೂರ್ ಮೇಲಿನ ಗೌರವಕ್ಕೆ ಪತ್ರಕರ್ತರು ಸುಮ್ಮನಾಗಿದ್ದರು. ಮತ್ತೊಮ್ಮೆ ಶ್ರದ್ಧಾ ಇದೇ ರೀತಿಯ ಆಟಿಟ್ಯೂಡ್ ಬಹಿರಂಗವಾದಾಗ ಶ್ರದ್ಧಾ ಕ್ಷಮೆ ಕೇಳುವವರೆಗೂ ಪತ್ರಕರ್ತರು ಹಠ ಹಿಡಿದು, ಕ್ಷಮೆ ಕೇಳುವಂತೆ ಮಾಡಿದ್ದರು.

ಸೈಫೀನಾ ಸ್ಸಾರಿ ಎಂದಿದ್ದರು :

ಮತ್ತೊಮ್ಮೆ ಕಾರ್ಯಕ್ರಮಕ್ಕೆ ಗಂಟೆಗಳಷ್ಟು ತಡವಾಗಿ ಬಂದಾಗ ಸೈಫ್ ಅಲಿ ಖಾನ್ ಮತ್ತು ಕರೀನಾ ಕಪೂರ್ ಅವರ ಪ್ರೆಸ್`ಮೀಟ್`ನ್ನು ಬಹಿಷ್ಕರಿಸಿ ಹೊರಟಿದ್ದರು ಪತ್ರಕರ್ತರು. ಕೊನೆಗೆ ಅಲ್ಲಿಯೇ ಸೈಫ್-ಕರೀನಾ ಕ್ಷಮೆಯಾಚಿಸಿ ವಿವಾದ ದೊಡ್ಡದಾಗದಂತೆ ನೋಡಿಕೊಂಡಿದ್ದರು.

ಆದರೆ ಬಾಲಿವುಡ್`ನಲ್ಲಿ ಸುದೀರ್ಘ ಕಾಲದ ಬ್ಯಾನ್ ಎದುರಿಸಿದ ನಟ ಎಂದರೆ ಅದು ಬಾಲಿವುಡ್ ಬಿಗ್ ಬಿ ಎಂದೇ ಕರೆಸಿಕೊಳ್ಳುವ ಅಮಿತಾಭ್ ಬಚ್ಚನ್. ಆದರೆ ಅಮಿತಾಬ್ ವಿಷಯದಲ್ಲಿ ಮಾಧ್ಯಮಗಳೇ ತಪ್ಪು ಮಾಡಿದ್ದವು ಎಂದು ಅಮಿತಾಬ್ ಇತ್ತೀಚೆಗೆ ಹೇಳಿಕೊಂಡಿದ್ದರು. ಆಗ ಮಾಧ್ಯಮಗಳಲ್ಲಿ ತುರ್ತು ಪರಿಸ್ಥಿತಿ ವೇಳೆ ಮಾಧ್ಯಮಗಳು, ಪತ್ರಿಕೆಗಳನ್ನು ಹಿಡಿತದಲ್ಲಿಟ್ಟುಕೊಳ್ಳುವುದಕ್ಕೆ ಅಮಿತಾಬ್ ಅವರೇ ಕಾರಣ ಎಂದು ವರದಿಯಾಗಿತ್ತಂತೆ. ಅಮಿತಾಬ್ ಈ ವಿಷಯಕ್ಕೆ ಪತ್ರಕರ್ತರಿಂದ ಬ್ಯಾನ್ ಎದುರಿಸಿದ್ದರಂತೆ. ಆದರೆ ಆ ವೇಳೆಯಲ್ಲಿಯೇ ಬ್ಯಾನ್ ನಡುವೆಯೇ  ಅಮಿತಾಬ್ ಬಚ್ಚನ್ ದೀವಾರ್, ಶರಾಬಿ, ಮುಕದ್ದರ್ ಕಾ ಸಿಕಂದರ್, ಲಾವಾರೀಸ್.. ಮೊದಲಾದ ಸೂಪರ್ ಹಿಟ್ ಕೊಟ್ಟಿದ್ದರು ಎನ್ನುವುದು ಇತಿಹಾಸ. ಕೂಲಿ ಚಿತ್ರದ ಶೂಟಿಂಗ್ ವೇಳೆಯ ಆಕ್ಸಿಡೆಂಟ್ ಎಲ್ಲವನ್ನೂ ಬದಲಾಯಿಸಿದ್ದು ಕೂಡಾ ಇತಿಹಾಸವೇ.