ನಟಿ ಅನುಪ್ರಭಾಕರ್ ಚಿತ್ರರಂಗದಲ್ಲಿ ಉತ್ತುಂಗದಲ್ಲಿರುವಾಗಲೇ ಮದುವೆಯಾದರು. ಅಭಿನಯ ಶಾರದೆ ಜಯಂತಿ ಅವರ ಪುತ್ರನ ಜೊತೆ ಮದುವೆಯಾಗಿತ್ತು. ಅದಾದ ನಂತರ ಕೆಲವೇ ವರ್ಷಗಳಲ್ಲಿ ಅನುಪ್ರಭಾಕರ್ ವಿಚ್ಛೇದನ ಪಡೆದುಕೊಂಡರು. ಆದರೆ ವಿಚ್ಚೇಧನದ ಬಗ್ಗೆ ಎಲ್ಲಿಯೂ ಮಾತನಾಡಿರಲಿಲ್ಲ. ಈ ಬಗ್ಗೆ ಚಿತ್ರಲೋಕದಲ್ಲಿ ಮಾತನಾಡಿರುವ ನಟಿ ಅನುಪ್ರಭಾಕರ್ ತಮ್ಮ ಮದುವೆ, ಡೈವೋರ್ಸ್ ಹಾಗೂ ಜಯಂತಿಯವರ ಜೊತೆಗಿನ ಬಾಂಧವ್ಯದ ಬಗ್ಗೆಯೂ ಹೇಳಿಕೊಂಡಿದ್ದಾರೆ.
ಮನುಷ್ಯನಿಗೆ ಇರೋದು ಒಂದೇ ಜೀವನ. ಆ ಜೀವನವನ್ನು ಸಂತೋಷದಿಂದ ಬಾಳಬೇಕು. ಖುಷಿಯಾಗಿ ಬದುಕಬೇಕು. ನೋವಿನಲ್ಲಿಯೇ ಜೀವನ ಸಾಗಿಸುವಂತೆ ಆಗಬಾರದು. ನಾವಿಬ್ಬರೂ ಒಟ್ಟಿಗೆ ಇರಲು ಆಗುವುದಿಲ್ಲ. ಸಂತೋಷ ಅಸಾಧ್ಯವೆಂದೆನಿಸಿದಾಗ ನೋವು ಕೊಡುವ ನಿರ್ಧಾರಗಳಾದರೂ ಸರಿ, ತೆಗೆದುಕೊಳ್ಳಬೇಕಾಗುತ್ತದೆ. ನಾನು ಆ ಘಟನೆ ಬಗ್ಗೆ ಯೋಚಿಸಿದಾಗ, ನನ್ನ ತಾಯಿ ಅಣ್ಣ ಮತ್ತು ಸ್ಕೂಲ್ ಫ್ರೆಂಡ್ಸ್ ನನ್ನ ಪರ ನಿಂತುಕೊಂಡರು. ಆಗ ನನ್ನ ತಂದೆ ಇರಲಿಲ್ಲ. ಈ ರೀತಿ ಘಟನೆ ಹೆಣ್ಣು ಮಕ್ಕಳ ಜೀವನದಲ್ಲಿ ನಡೆದರೆ, ಕುಗ್ಗುತ್ತಾರೆ. ಫ್ಯಾಮಿಲಿ ಸಪೋರ್ಟ್ ಇದ್ದಿದ್ದರಿಂದ ನನಗೆ ಮತ್ತೊಂದು ಲೈಫ್ ಕ್ರಿಯೇಟ್ ಮಾಡಿಕೊಳ್ಳಲು ಸಾಧ್ಯವಾಯ್ತು. ಸಮಾಜದಲ್ಲಿ ಯಾರೂ ಯಾರಿಗೂ ಸಪೋರ್ಟ್ ಮಾಡುವುದಿಲ್ಲ. ಕೊನೆಗೆ ನಮ್ಮ ಪರ ನಿಲ್ಲುವುದು ತಂದೆ- ತಾಯಿ ಮಾತ್ರ. ಡಿವೋರ್ಸ್ ಪರಿಹಾರ ಎಂದು ನಾನು ಹೇಳುವುದಿಲ್ಲ. ಸರಿ ಮಾಡಿಕೊಳ್ಳಿ, ಇಲ್ಲ ಸೂಕ್ತವಾದ ನಿರ್ಧಾರ ತೆಗೆದುಕೊಳ್ಳಿ ಎಂದಿದ್ದಾರೆ ಅನು ಪ್ರಭಾಕರ್.
ಜಯಂತಿಯವರನ್ನು ಅನು ಪ್ರಭಾಕರ್ ಇಂದಿಗೂ ಜಯಂತಿಯಮ್ಮ ಎಂದೇ ಪ್ರೀತಿಯಿಂದ ಕರೆಯುತ್ತಾರೆ.
ಮದುವೆ ಆದ್ಮೇಲೆ ನಾನು ಕೆಲಸ ನಿಲ್ಲಿಸಬಾರದೆಂದು ಎಂದು ಜಯಂತಿ ಅಮ್ಮನವರು ಹೇಳಿದ್ದರು. ಮದುವೆ ಆದ ವರ್ಷವೇ 9 ಸಿನಿಮಾಗಳಲ್ಲಿ ನಟಿಸಿದೆ. ಮೊದಲಿನಿಂದಲೂ ಡ್ರೆಸ್ ತುಂಬಾ ಸಿಂಪಲ್ ಹಾಕಿಕೊಳ್ಳುವುದು. ಗ್ರ್ಯಾಂಡ್ ಆಗಿ ರೆಡಿ ಆಗಬೇಕು ಅಂತ ಅವರೇ ಸಲಹೆ ಕೊಡುತ್ತಿದ್ದರು. ಮೊದಲ ಮದುವೆಯಲ್ಲಿ ಏನಾಯ್ತು, ಯಾಕಾಯ್ತು ಎನ್ನುವ ವಿಚಾರವನ್ನು ನಾನು ಮಾತನಾಡುವುದಿಲ್ಲ ಎಂದಿದ್ದಾರೆ ಅನು ಪ್ರಭಾಕರ್.
ಅನುಪ್ರಭಾಕರ್ ಅದಾದ ನಂತರ ರಘು ಮುಖರ್ಜಿ ಜೊತೆ ಮದುವೆಯಾದರು. ಅದು ಲವ್ ಮ್ಯಾರೇಜ್. ದಂಪತಿ ಜೊತೆಯಾಗಿದ್ದಾರೆ. ಖುಷಿಯಾಗಿದ್ದಾರೆ. ಆ ಖುಷಿಯ ಪ್ರತಿಫಲವಾಗಿ ಮುದ್ದು ಕಂದ ವಂದನಾ ಇದ್ದಾಳೆ. ಅನುಪ್ರಭಾಕರ್ ತಮ್ಮ ಬದುಕಿನ ಚಿತ್ರಲೋಕದಲ್ಲಿ ಮಾತನಾಡಿದ್ದಾರೆ.