` ಆಪ್ತಮಿತ್ರ 2  V/S ಆಪ್ತಮಿತ್ರ 2 - Exclusive - chitraloka.com | Kannada Movie News, Reviews | Image

User Rating: 5 / 5

Star activeStar activeStar activeStar activeStar active
 
apthamitra 2
Apthamitra 2 Vs Apthamitra 2

ಆಪ್ತಮಿತ್ರ ಬಂತು..ಸೂಪರ್ ಹಿಟ್. ಆಪ್ತರಕ್ಷಕ ಬಂತು. ಅದೂ ಸೂಪರ್ ಡ್ಯೂಪರ್ ಹಿಟ್. ಆ ಎರಡೂ ಚಿತ್ರಗಳು ತೆಲುಗು, ತಮಿಳಿಗೆ ರೀಮೇಕ್ ಆದವು. ಅಲ್ಲಿಯೂ ಸೂಪರ್ ಹಿಟ್. ಈಗ ಆಪ್ತಮಿತ್ರ 2 ಬರುತ್ತಿದೆ. ಅರೆ..ಆಪ್ತರಕ್ಷಕ ಚಿತ್ರವೇ ಆಪ್ತಮಿತ್ರ ಚಿತ್ರದ ಸೀಕ್ವೆಲ್ ಅಲ್ವಾ..? ಎಂಬ ಪ್ರಶ್ನೆ ಕೇಳಬೇಡಿ. ಅದಕ್ಕೊಂದು ಅದ್ಭುತ ಕಥೆ, ಚಿತ್ರಕಥೆ ಹೆಣೆದು ಸಿದ್ಧವಾಗಿರುವುದು ಪಿ. ವಾಸು. ಆಪ್ತಮಿತ್ರ ಹಾಗೂ ಆಪ್ತರಕ್ಷಕ ಚಿತ್ರಗಳ ನಿರ್ದೇಸಿದ್ದ ಅದೇ ನಿರ್ದೇಶಕ.

ಹೀಗೊಂದು ಕಥೆ, ಚಿತ್ರಕಥೆ ಸಿದ್ಧವಾಗಿದೆ. ನಾವು ಆಪ್ತಮಿತ್ರ 2 ಮಾಡುತ್ತಿದ್ದೇವೆ ಎಂದು ನಿರ್ಮಾಪಕ ರಮೇಶ್ ಯಾದವ್ ಇತ್ತೀಚೆಗೆ ಬಹಿರಂಗಪಡಿಸಿದ್ದರು. ಈಗಾಗಲೇ ಚಿತ್ರದ ಸೀಕ್ವೆಲ್ ರೂಪದಲ್ಲಿ ಆಪ್ತರಕ್ಷಕ ಬಂದಿರುವಾಗ ಆಪ್ತಮಿತ್ರ 2 ಹೇಗೆ ಸಾಧ್ಯ..? ಎರಡೂ ಚಿತ್ರಗಳಲ್ಲಿ ರಂಜಿಸಿದ್ದ ವಿಷ್ಣುವರ್ಧನ್ ಕೂಡಾ ನಮ್ಮೊಂದಿಗಿಲ್ಲ. ಹೀಗಿರುವಾಗ ಇದು ಹೇಗೆ ಎಂಬ ಪ್ರಶ್ನೆಗೆ ಸಿನಿಮಾ ನೋಡಿ ಎಂದಿದ್ದರು. ಹೀಗಾಗಿ ಚಿತ್ರದ ಪ್ರಕಟಣೆಯೇ ದೊಡ್ಡ ನಿರೀಕ್ಷೆ ಹುಟ್ಟು ಹಾಕಿತ್ತು.

ಆದರೆ, ಈಗ ಆಪ್ತಮಿತ್ರ 2 V/S ಆಪ್ತಮಿತ್ರ 2 ಟೈಟಲ್ ವಾರ್ ಶುರುವಾಗಿಬಿಟ್ಟಿದೆ. ರಮೇಶ್ ಯಾದವ್, ಪಿ.ವಾಸು ಜೋಡಿಯ ಆಪ್ತಮಿತ್ರ 2 ಘೋಷಣೆಯಾಗಿರುವಾಗ, ಇನ್ನೊಂದು ಆಪ್ತಮಿತ್ರ 2 ಎಲ್ಲಿಂದ ಬಂತು..? ಅದಕ್ಕೆ ಉತ್ತರ ಚಿತ್ರದ ಈ ಪೋಸ್ಟರ್​ನಲ್ಲಿದೆ. ಇನ್ನೊಂದು ಆಪ್ತಮಿತ್ರ 2 ಚಿತ್ರದ ಘೋಷಣೆ ಮಾಡಿರುವುದು ಶ್ವೇತಾ ಅರುಣ್. ಆಕೆ ನಿರ್ಮಾಪಕಿಯಾದರೆ, ಶಂಕರ್ ಅರುಣ್ ಎಂಬುವವರು ಚಿತ್ರದ ನಿರ್ದೇಶಕರು. 

ಟೈಟಲ್​ನ ಟ್ವಿಸ್ಟ್ ಇರೋದು ಇಲ್ಲೇ ಶಂಕರ್ ಅರುಣ್ ನಿರ್ದೇಶನದ ಚಿತ್ರ ಆಪ್ತಮಿತ್ರ 2 ಅಲ್ಲ. ಅದು ನಾಗವಲ್ಲಿ V/S ಆಪ್ತಮಿತ್ರ 2. ಉದ್ದೇಶಪೂರ್ವಕವಾಗಿಯೇ ಚಿತ್ರದ ಪೋಸ್ಟರ್​ನಲ್ಲಿ ನಾಗವಲ್ಲಿ ಹೆಸರನ್ನು ಸಣ್ಣ ಫಾಂಟ್​ನಲ್ಲಿ ಮುದ್ರಿಸಲಾಗಿದೆ. ನಿಯಮಗಳನ್ನೂ ಮೀರಲಾಗಿದೆ. ಇದು ವಿವಾದ ಸೃಷ್ಟಿಸುವ ಕಸುಬೇ ಹೊರತು, ಚಿತ್ರ ನಿರ್ಮಿಸುವವರ ಕ್ರಿಯೇಟಿವಿಟಿಯಂತೆ ಕಾಣುತ್ತಿಲ್ಲ.

ಈಗಾಗಲೇ ಆಪ್ತಮಿತ್ರ 2 ಚಿತ್ರದ ಟೈಟಲ್ ಮತ್ತು ನಿರ್ದೇಶಕರ ಘೋಷಣೆಯಾಗಿ, ಅದು ಚಿತ್ರೀಕರಣಕ್ಕೆ ಸಿದ್ಧವಾಗಿರುವಾಗ, ಅದೇ ಹೆಸರನ್ನು ಅಲ್ಪಸ್ವಲ್ಪ ಬದಲಾಯಿಸಿ, ಪ್ರೇಕ್ಷಕರನ್ನು ಗೊಂದಲಕ್ಕೆ ಕೆಡವುತ್ತಿರುವುದು ಏಕೆ..? ಈ ಪ್ರಶ್ನೆಗೆ ಉತ್ತರ ಕೊಡಬೇಕಿರೋದು ಶಂಕರ್ ಅರುಣ್ ಮತ್ತು ಶ್ವೇತಾ ಅರುಣ್. 

ನಿಯಮಗಳನ್ನೂ ಗಾಳಿಗೆ ತೂರಿ, ವಿನಾಕಾರಣ ವಿವಾದ ಸೃಷ್ಟಿಸುತ್ತಿರುವ ನಾಗವಲ್ಲ V/S ಆಪ್ತಮಿತ್ರ 2 ಚಿತ್ರದ ನಿರ್ಮಾಪಕರು,ನಿರ್ದೇಶಕರು ಹೊಸ ವಿವಾದಕ್ಕೆ ನಾಂದಿ ಹಾಡಿದ್ದಾರೆ. ರಮೇಶ್ ಯಾದವ್ ಕಾನೂನು ಸಮರ ನಡೆಸುವ ಚಿಂತನೆಯಲ್ಲಿದ್ದಾರೆ.