ಸಿಂಧನೂರಿನಲ್ಲಿ ರಾಷ್ಟ್ರೀಕೃತ ಬ್ಯಾಂಕ್ಗಳಿಂದ ಸಾಲ ಮನ್ನಾ ಮಾಡಿಸುವಂತೆ ಕಾಂಗ್ರೆಸ್ ಜುಲೈ 31ರಂದು ಬೃಹತ್ ಱಲಿ ಆಯೋಜಿಸಿದೆ. ರಾಯುಚೂರು ಜಿಲ್ಲಾ ಯುವ ಕಾಂಗ್ರೆಸ್ ಆಯೋಜಿಸಿರುವ ಱಲಿಯಲ್ಲಿ ಸಿಎಂ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಪರಮೇಶ್ವರ್ ಸೇರಿದಂತೆ ಕಾಂಗ್ರೆಸ್ನ ಅತಿರಥ ನಾಯಕರೆಲ್ಲ ಭಾಗವಹಿಸುತ್ತಿದ್ದಾರೆ. 10 ಕಿ.ಮೀ. ಪಾದಯಾತ್ರೆಯನ್ನೂ ನಡೆಸಲಿದ್ದಾರೆ. ಆದರೆ, ವಿಷಯ ಅದಲ್ಲ. ಆ ಱಲಿಯಲ್ಲಿ ಚಿತ್ರನಟ ಯಶ್ ಕೂಡಾ ಭಾಗವಹಿಸುತ್ತಿದ್ದಾರೆ ಎಂದು ಯುವ ಕಾಂಗ್ರೆಸ್ ಅಧ್ಯಕ್ಷ ಬಸವನಗೌಡ ಬಾದರ್ಲಿ ಸುದ್ದಿಗೋಷ್ಟಿಯಲ್ಲಿ ಹೇಳಿದ್ದರು. ಅಷ್ಟೇ ಅಲ್ಲ, ಆ ದಿನ ಕಾಂಗ್ರೆಸ್ನ ಱಲಿಯಲ್ಲಿ ಭಾಗವಹಿಸಲಿರುವ ಯಶ್ ಅವರಿಗೆ ಸ್ವಾಗತ ಕೋರುವ ಪೋಸ್ಟರ್ಗಳು, ಬ್ಯಾನರ್ಗಳು ಅಲ್ಲಿ ರಾರಾಜಿಸುತ್ತಿವೆ.
ಇದು ನಿಜಾನಾ..?
ಯಶ್ ಆ ಱಲಿಗೆ ಹೋಗುತ್ತಿದ್ದಾರಾ ಎಂದು ಯಶ್ ಅವರನ್ನೇ ಸಂಪರ್ಕಿಸಲು ಚಿತ್ರಲೋಕ ಡಾಟ್ ಕಾಮ್ ಪ್ರಯತ್ನಿಸಿತು. ಆದರೆ, ಯಶ್ ಕೆಜಿಎಫ್ ಶೂಟಿಂಗ್ನಲ್ಲಿ ಬ್ಯುಸಿಯಿದ್ದ ಕಾರಣ, ಫೋನ್ ಸ್ವೀಕರಿಸಲಿಲ್ಲ. ನಂತರ ಚಿತ್ರಲೋಕ ಡಾಟ್ ಕಾಮ್ಗೆ ಸಿಕ್ಕ ಸುದ್ದಿಮೂಲಗಳ ಪ್ರಕಾರ, ಸಿಂಧನೂರಿನಲ್ಲಿ ಅಂಥಾದ್ದೊಂದು ಕಾರ್ಯಕ್ರಮ ಇದೆ ಎನ್ನುವ ವಿಷಯವೇ ಯಶ್ಗೆ ಗೊತ್ತಿಲ್ಲ. ಯಶ್ ಅವರಿಗೂ ಈ ಪೋಸ್ಟರ್ಗಳು, ಹೇಳಿಕೆಗಳು ಅಚ್ಚರಿ ತಂದಿವೆ.
ಕಮಿಟ್ಮೆಂಟ್ ವಿಷಯಕ್ಕೆ ಬಂದರೆ ಯಶ್ ಚಿತ್ರವೊಂದರ ಶೂಟಿಂಗ್ನಲ್ಲಿ ಅದು ಎಂತಹ ಕಾರ್ಯಕ್ರಮವೇ ಇದ್ದರೂ ಹೋಗೋದಿಲ್ಲ. ಶೂಟಿಂಗ್ನ್ನು ಯಾವುದೇ ಕಾರಣಕ್ಕೂ ಮಿಸ್ ಮಾಡುವುದಿಲ್ಲ. ಅದರಲ್ಲೂ ಕೆಜಿಎಫ್ ಚಿತ್ರದಲ್ಲಿ ಯಶ್ ಎಷ್ಟು ಬ್ಯುಸಿಯಾಗಿದ್ದಾರೆಂದರೆ, ಆ ಸಿನಿಮಾ ಹೊರತುಪಡಿಸಿ ಮಿಕ್ಕ ಯಾವುದರಲ್ಲೂ ಭಾಗವಹಿಸುತ್ತಿಲ್ಲ. ಕೆಜಿಎಫ್ ಎಂದೇ ಅಲ್ಲ, ಶೂಟಿಂಗ್ ಇದ್ದಾಗ ವೈಯಕ್ತಿಕ ಕೆಲಸಗಳನ್ನೂ ದೂರ ಇಡುವ ನಟ ಯಶ್.
ಹೀಗಾಗಿ ಯಶ್ ಆ ದಿನದ ಕಾಂಗ್ರೆಸ್ ಱಲಿಗೆ ಹೋಗುತ್ತಿಲ್ಲ ಎಂದು ಚಿತ್ರಲೋಕ ಡಾಟ್ ಕಾಮ್ ಮೂಲಗಳು ಸ್ಪಷ್ಟಪಡಿಸಿವೆ. ಆದರೆ, ಯಶ್ ಅವರಿಗೇ ಗೊತ್ತಿಲ್ಲದೆ ಅವರ ಹೆಸರಿನಲ್ಲಿ ಪೋಸ್ಟರ್, ಬ್ಯಾನರ್ಗಳು ಹರಿದಾಡುತ್ತಿರುವುದೇಕೆ ಎನ್ನುವುದೇ ನಿಗೂಢ.