ಪುನೀತ್ ರಾಜ್ಕುಮಾರ್ ಅಭಿನಯದ ರಾಜಕುಮಾರ ಚಿತ್ರದ ಯಶಸ್ಸು ಇಡೀ ಚಿತ್ರರಂಗಕ್ಕೆ ಉತ್ಸಾಹ ತುಂಬಿದೆ. ಅಭೂತಪೂರ್ವ ಯಶಸ್ಸನ್ನು ನಿರ್ಮಾಪಕ ಕಾರ್ತಿಕ್ ಗೌಡ ಇಡೀ ಚಿತ್ರರಂಗದ ಜೊತೆ ಹಂಚಿಕೊಳ್ಳಲು ನಿರ್ಧರಿಸಿದ್ದಾರೆ.
ಜುಲೈ 7ಕ್ಕೆ ಬೆಂಗಳೂರಿನಲ್ಲಿ ಬೃಹತ್ ಸಮಾರಂಭ ನಡೆಯಲಿದೆ. ಸಮಾರಂಭಕ್ಕೆ ರಾಜಕುಮಾರ ಚಿತ್ರತಂಡವಷ್ಟೇ ಅಲ್ಲ, ಇಡೀ ರಾಜ್ ಕುಟುಂಬ ಭಾಗವಹಿಸಲಿದೆ. ಕ್ರೇಜಿಸ್ಟಾರ್ ರವಿಚಂದ್ರನ್, ಕಿಚ್ಚ ಸುದೀಪ್, ರಾಕಿಂಗ್ ಸ್ಟಾರ್ ಯಶ್, ಗೋಲ್ಡನ್ ಸ್ಟಾರ್ ಗಣೇಶ್ ಸೇರಿದಂತೆ ಚಿತ್ರರಂಗದ ಗಣ್ಯಾತಿಗಣ್ಯರು ರಾಜಕುಮಾರನ ಸಂಭ್ರಮದಲ್ಲಿ ಪಾಲ್ಗೊಳ್ಳುತ್ತಿದ್ದಾರೆ.
ಅಷ್ಟೇ ಅಲ್ಲ, ಬಾಕ್ಸಾಫೀಸ್ನಲ್ಲಿ ದಾಖಲೆಯನ್ನೇ ಸೃಷ್ಟಿಸಿರುವ ಚಿತ್ರ, ಚಿತ್ರದಲ್ಲಿ ಭಾಗವಹಿಸಿದ ಪ್ರತಿಯೊಬ್ಬ ತಂತ್ರಜ್ಞರನ್ನು, ಕಾರ್ಮಿಕರನ್ನೂ ಆ ದಿನ ಸ್ಮರಣಿಕೆ ನೀಡಿ ಗೌರವಿಸಲಿದೆ. ಇಂಥಾದ್ದೊಂದು ಸಂಪ್ರದಾಯ ರಾಜ್ ಕುಟುಂಬದ ಬ್ಯಾನರ್ನ ಚಿತ್ರಗಳಲ್ಲಿ ಸಾಮಾನ್ಯವಾಗಿತ್ತು. ಆ ಸಂಪ್ರದಾಯವನ್ನು ಕಾರ್ತಿಕ್ ಗೌಡ ಅವರು ಕೂಡಾ ಆರಂಭಿಸಿದ್ದಾರೆ.
ಒಟ್ಟಿನಲ್ಲಿ ರಾಜಕುಮಾರ ಚಿತ್ರದ ಯಶಸ್ಸು, ಇಡೀ ಚಿತ್ರರಂಗದಲ್ಲಿ ಹಬ್ಬ ಸೃಷ್ಟಿಸಿದೆ ಎಂದರೆ ತಪ್ಪಾಗಲಾರದು.