ಹೆಡ್ ಬುಷ್ ಚಿತ್ರ ಥಿಯೇಟರುಗಳಲ್ಲಿ ಚೆನ್ನಾಗಿಯೇ ಹೋಗುತ್ತಿದೆ. ಒಳ್ಳೆಯ ಕಲೆಕ್ಷನ್ ಕೂಡಾ ಮಾಡುತ್ತಿದೆ. ಇದರ ಮಧ್ಯೆ ಡಾಲಿ ಧನಂಜಯ್ ಅವರನ್ನು ಟಾರ್ಗೆಟ್ ಮಾಡಿ ವಿಲನ್ ಎಂಂಬಂತೆ ಬಿಂಬಿಸುವ ಯತ್ನವೂ ಜರುಗಿದೆ. ವೀರಗಾಸೆಗೆ ಅವಮಾನ ಮಾಡಿದ್ದಾರೆ ಎಂದು ಒಂದು ತಂಡ, ಕರಗಕ್ಕೆ ಅವಮಾನ ಮಾಡಿದ್ದಾರೆ ಎಂದು ಮತ್ತೊಂದು ತಂಡ ಪ್ರಚಾರ ಮಾಡಿ ವಿವಾದವೆಬ್ಬಿಸಿದರು. ನಂತರ ಸಿನಿಮಾ ನೋಡಿ ಸಂಧಾನದೊಂದಿಗೆ ಸುಮ್ಮನಾದರು. ಅಭಿಮಾನಿಗಳೇ ಚಿತ್ರದ ಪರ ಪ್ರಚಾರಕ್ಕೆ ನಿಂತರು. ಅಭಿಮಾನಿಗಳ ಆರ್ಭಟಕ್ಕೆ ವಿರೋಧದ ಧ್ವನಿಯೆತ್ತಿದವರ ತಣ್ಣಗಾದರು. ಆದರೆ ಅಭಿಮಾನ ಅತಿರೇಕಕ್ಕೆ ಹೋದರೆ ಏನಾಗಬಹುದೋ.. ಅದೇ ಈಗ ವಿಧಾನಸೌಧ ಮೆಟ್ರೋ ಸ್ಟೇಷನ್ ಎದುರು ಆಗಿದೆ.
ವಿಧಾನಸೌಧದ ಮೆಟ್ರೋ ಸ್ಟೇಷನ್ ಎದುರು ಐವರು ಯುವಕರು ಹೆಡ್ ಬುಷ್ ಚಿತ್ರದ ಪರ ಘೋಷಣೆ ಕೂಗುತ್ತಾ ಪ್ರಚಾರ ನಡೆಸುತ್ತಿದ್ದರು. ಬೈಕುಗಳಲ್ಲಿ ಓಡಾಡುತ್ತಾ ಸಾರ್ವಜನಿಕರಿಗೂ ತೊಂದರೆ ಕೊಡುತ್ತಿದ್ದರು. ಈ ಹಿನ್ನೆಲೆಯಲ್ಲಿ ಶಿವಕುಮಾರ್ ಎಂಬುವವರು ದೂರು ನೀಡಿದ್ದು ಐವರ ವಿರುದ್ಧ ಎಫ್‍ಐಆರ್ ದಾಖಲಾಗಿದೆ.
ಶೂನ್ಯ ನಿರ್ದೇಶನದ ಚಿತ್ರಕ್ಕೆ ಅಗ್ನಿ ಶ್ರೀಧರ್ ಚಿತ್ರಕಥೆ ಮತ್ತು ಸಂಭಾಷಣೆ ಬರೆದಿದ್ದಾರೆ. ಡಾಲಿ, ಯೋಗಿ, ವಸಿಷ್ಠ ಸಿಂಹ, ದೇವರಾಜ್, ಶ್ರುತಿ ಹರಿಹರನ್, ಪಾಯಲ್ ರಜಪೂತ್, ರಘು ಮುಖರ್ಜಿ.. ಮೊದಲಾದವರು ನಟಿಸಿರೋ ಚಿತ್ರದಲ್ಲಿ ಡಾನ್ ಜೈರಾಜ್ ಜೀವನ ಚರಿತ್ರೆಯಿದೆ.