ರಾಜಮೌಳಿ ತಾನು ಕನ್ನಡದವನು, ರಾಯಚೂರಿನವರು ಎಂದು ಹೇಳಿಕೊಳ್ತಾರೆಯೇ ಹೊರತು, ಅವರಿಂದ ಕನ್ನಡಕ್ಕೆ, ಕರ್ನಾಟಕಕ್ಕೆ ಏನು ಉಪಯೋಗವಾಗಿದೆ..? ಅವರಿಗೆ ಕನ್ನಡದ ನಂಟು ನೆನಪಾಗುವುದು ಅವರ ಸಿನಿಮಾ ಬಿಡುಗಡೆ ವೇಳೆ ಮಾತ್ರ. ಅವರಿಗೆ ಕರ್ನಾಟಕ ಒಂದು ಮಾರುಕಟ್ಟೆ.. ಹೀಗೆ ರಾಜಮೌಳಿ ವಿರುದ್ಧ ಕೆಂಡಕಾರಿರುವುದು ನಿರ್ದೇಶಕ ಎಸ್.ವಿ.ರಾಜೇಂದ್ರ ಸಿಂಗ್ ಬಾಬು.
ಇತ್ತೀಚೆಗೆ ಆಂಧ್ರಪ್ರದೇಶ ಸಿಎಂ ಜಗನ್ ಮೋಹನ್ ರೆಡ್ಡಿ, ಚಿತ್ರರಂಗಕ್ಕೆ ಒಳ್ಳೆಯ ನೆರವು ಕೊಟ್ಟಿದ್ದಾರೆ ಎಂದು ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಹಾಕಿದ್ದ ರಾಜಮೌಳಿ, ಆಂಧ್ರ ಸಿಎಂಗೆ ಧನ್ಯವಾದ ತಿಳಿಸಿದ್ದರು. ಇದಕ್ಕೆ ಕಾಮೆಂಟ್ ಮಾಡಿರುವ ಎಸ್‍ವಿಆರ್ ಬಾಬು, ರಾಜಮೌಳಿಯವರನ್ನು ಹಿಗ್ಗಾಮುಗ್ಗಾ ಜಾಡಿಸಿದ್ದಾರೆ.
ರಾಜಮೌಳಿ ಕನ್ನಡದಿಂದಲೇ ಕಥೆ, ಚಿತ್ರಕಥೆ, ದೃಶ್ಯಗಳನ್ನು ಯಥಾವತ್ತು ಎತ್ತಿಕೊಳ್ತಾರೆ. ಡಾ.ರಾಜ್ ಕುಮಾರ್ ಅವರ ರಾಜ ನನ್ನ ರಾಜ, ಮಯೂರ ಚಿತ್ರದ ಕಥೆಗಳನ್ನು ಕದ್ದಿದ್ದೀಯ. ಕನ್ನಡದ ಕಾದಂಬರಿಗಳಿಂದಲೂ ದೃಶ್ಯಗಳನ್ನು ಎತ್ತಿಕೊಂಡಿದ್ದೀಯ. ಎತ್ತಿನ ಕೊಂಬಿಗೆ ಬೆಂಕಿ ಹಚ್ಚಿ ಯುದ್ಧ ಮಾಡುವ, ನೀರಿನೊಳಗೆ ಹೋರಾಡುವ ತಂತ್ರಗಳೆಲ್ಲ ಮದಕರಿ ನಾಯಕನ ಯದ್ಧ ತಂತ್ರಗಳು. ಅನಕೃ ಸೇರಿದಂತೆ ಹಲವು ಕಾದಂಬರಿಗಳಲ್ಲಿವೆ. ಅದನ್ನೂ ಹೇಳಿಕೊಳ್ಳಲ್ಲ. ರಾಜಮೌಳಿ ಒಬ್ಬ ಸ್ವಾರ್ಥಿ, ಅವಕಾಶವಾದಿ ಎಂದಿದ್ದಾರೆ ಎಸ್‍ವಿಆರ್ ಬಾಬು.
ಬಾಬು ಸಿಟ್ಟಿಗೆ ಕಾರಣವೂ ಇದೆ. ಬಾಬು ಈ ಹಿಂದೆ ಚಲನಚಿತ್ರ ಅಕಾಡೆಮಿ ಅಧ್ಯಕ್ಷರಾಗಿದ್ದಾಗ ಸೆಮಿನಾರ್‍ವೊಂದಕ್ಕೆ ಕರೆದರಂತೆ. ಪ್ರಖ್ಯಾತ ನಿರ್ದೇಶಕರಾದ ಮಣಿರತ್ನಂ, ಸಂಜಯ್ ಲೀಲಾ ಬನ್ಸಾಲಿ, ಓಂಪ್ರಕಾಶ್ ಮೆಹ್ರ ಅಂತಹವರು ಬಂದರೂ, ರಾಜಮೌಳಿ ಬರಲಿಲ್ಲ. ತಾತ್ಸಾರವಾಗಿ ನೋಡಿದರು. ಈತನಿಗೆ ಕನ್ನಡದ ಮಾರುಕಟ್ಟೆ ಬೇಕೇ ಹೊರತು, ಕನ್ನಡಿಗರು, ಕರ್ನಾಟಕ ಬೇಕಿಲ್ಲ. ಕರ್ನಾಟಕದಿಂದ ಕೋಟಿ ಕೋಟಿ ಬಾಚಿರುವ ಈತ ಕರ್ನಾಟಕದ ಯಾವ ಸಂಕಷ್ಟಕ್ಕೆ ನೆರವಾಗಿದ್ದಾರೆ. ಪ್ರವಾಹದಲ್ಲಾಗಲೀ, ಕೊರೊನಾ ಕಷ್ಟದಲ್ಲಾಗಲೀ.. ಇವರು ಆಂಧ್ರ, ತೆಲಂಗಾಣಕ್ಕೆ ನೆರವು ನೀಡುತ್ತಾರೆಯೇ ಹೊರತು, ಕರ್ನಾಟಕಕ್ಕೆ ನಯಾಪೈಸೆ ಕೊಟ್ಟಿದ್ದಾರೆಯೇ.. ಎಂದು ಪ್ರಶ್ನಿಸಿದ್ದಾರೆ ಬಾಬು.