ಚಿಕ್ಕಣ್ಣ, ಸದ್ಯಕ್ಕೆ ಕನ್ನಡದಲ್ಲಿ ಭರ್ಜರಿ ಡಿಮ್ಯಾಂಡಿನಲ್ಲಿರೋ ಕಾಮಿಡಿ ಸ್ಟಾರ್. ಬಡತನದಿಂದ ಅರಳಿದ ಪ್ರತಿಭೆ ಅನ್ನೊದು ಗೊತ್ತಿದ್ದರೂ, ವೀಕೆಂಡ್ ವಿತ್ ರಮೇಶ್ ನೋಡುವಾಗ ಚಿಕ್ಕಣ್ಣ ತಮ್ಮ ಜೀವನದ ಕಹಿ ಸತ್ಯವನ್ನು, ನಡೆದು ಬಂದ ದಾರಿಯನ್ನು ಯಾವುದೇ ಮುಜುಗರವಿಲ್ಲದೆ ಹೇಳಿಕೊಂಡರು.
ಚಿಕ್ಕಣ್ಣ ಮೊದಲು ಮಾಡುತ್ತಿದ್ದುದು ಗಾರೆ ಕೆಲಸ. ಗಾರೆ ಕೆಲಸ ಮಾಡಿಕೊಂಡೇ ರಂಗಭೂಮಿಯಲ್ಲಿ ನಟಿಸುತ್ತಿದ್ದ ಚಿಕ್ಕಣ್ಣ, ಕಾಮಿಡಿ ಕಿಲಾಡಿಗಳು ಮಾಡುತ್ತಿರುವಾಗಲೂ ಗಾರೆ ಕೆಲಸ ಬಿಟ್ಟಿರಲಿಲ್ಲ. ಏಕೆಂದರೆ, ಕಾಮಿಡಿ ಕಿಲಾಡಿಗಳಿಂದ ಬರುತ್ತಿದ್ದ ದುಡ್ಡು, ಜೀವನಕ್ಕೆ ಸಾಲುತ್ತಿರಲಿಲ್ಲ.
ಯಶ್ ಕೃಪೆಯಿಂದ ಕಿರಾತಕ ಚಿತ್ರದಲ್ಲಿ ಚಾನ್ಸ್ ಪಡೆದ ಚಿಕ್ಕಣ್ಣ, ಆ ಚಿತ್ರ ರಿಲೀಸ್ ಆದ ಮೇಲೆ ಚಾಮುಂಡಿ ಬೆಟ್ಟಕ್ಕೆ ಹತ್ತಿದ್ದರಂತೆ. ದೇವಿಯ ಎದುರು ಬೇಡಿಕೊಂಡಿದ್ದರಂತೆ. ಇನ್ನಾದರೂ ನನ್ನ ಜೀವನದಲ್ಲಿ ಒಳ್ಳೆಯ ದಿನ ಬರಲಿ ಎಂದು ಕೇಳಿಕೊಂಡಿದ್ದರಂತೆ.
ಕಿರಾತಕ ರಿಲೀಸ್ ಆಗುವ ಮೊದಲು ಕೂಡಾ ಗಾರೆ ಕೆಲಸ ಮಾಡಿದ್ದ ಚಿಕ್ಕಣ್ಣ, ನಂತರ ಹಿಂದಿರುಗಿ ನೋಡಿಲ್ಲ... ಈಗ.. ಚಿಕ್ಕಣ್ಣ ಬಳಿ ಹಣವೂ ಇದೆ. ಅಕ್ಕ ತಂಗಿಯರನ್ನೆಲ್ಲ ಪ್ರೀತಿಯಿಂದ ನೋಡಿಕೊಳ್ಳುವ ಚಿಕ್ಕಣ್ಣ, ತಮ್ಮಂತೆಯೇ ಕಷ್ಟದಲ್ಲಿರುವ ಬೇರೆ ಕಲಾವಿದರಿಗೂ ಸಹಾಯ ನೀಡುವಷ್ಟು ಶ್ರೀಮಂತರಾಗಿದ್ದಾರೆ. ಹೃದಯ ಶ್ರೀಮಂತಿಕೆಯೂ ಇದೆ.
ಆದರೆ, ಇದಾವುದೂ ಗೊತ್ತಿಲ್ಲದ, ಗೊತ್ತಿದ್ದರೂ.. ಇರಲಿಕ್ಕಿಲ್ಲ ಬಿಡ್ರಿ ಎನ್ನುತ್ತಿದ್ದವರಿಗೆ ವೀಕೆಂಡ್ ವಿತ್ ರಮೇಶ್ ನೋಡಿದಾಗ ಶಾಕ್ ಆಗಿರುವುದಂತೂ ನಿಜ.