ಕನ್ನಡ ಚಿತ್ರರಂಗದ ಖ್ಯಾತ ಖಳನಟರಲ್ಲಿ ಶರತ್ ಲೋಹಿತಾಶ್ವ ಹೆಸರಿಗೆ ಬೇರೆಯದ್ದೇ ಖದರ್ ಇದೆ. ದಕ್ಷಿಣ ಭಾರತದ ಎಲ್ಲ ಭಾಷೆಗಳಲ್ಲೂ ಗುರುತಿಸಿಕೊಂಡಿರುವ ಶರತ್ ಲೋಹಿತಾಶ್ವ ಈಗ ಸ್ವತಃ ಮೋಸ ಹೋಗಿದ್ದಾರೆ. ಬೆಳ್ಳಿತೆರೆಯ ಮೇಲಷ್ಟೇ ಮೋಸ, ಕಪಟ ಮಾಡಿ ಗೊತ್ತಿರುವ ನಟ ಶರತ್ ಲೋಹಿತಾಶ್ವ, ರಿಯಲ್ ಲೈಫ್ನಲ್ಲಿ ಮೋಸಗಾರನಿಂದ ಕಳೆದುಕೊಂಡಿರೋದು 60 ಲಕ್ಷ ರೂ.
ರಾಜಾಜಿನಗರದ ಶ್ರೀಧರ್ ಅಲಿಯಾಸ್ ಹರಿಪ್ರಸಾದ್ ಎಂಬ ವ್ಯಕ್ತಿ, ತಾನು ಕರ್ನಾಟಕ ಗೃಹ ಮಂಡಳಿಯಲ್ಲಿ ಉನ್ನತ ಅಧಿಕಾರಿ ಎಂದು ಪರಿಚಯಿಸಿಕೊಂಡಿದ್ದಾನೆ. ತಾನು ಚಿತ್ರರಂಗದಲ್ಲೇ ಹಲವರಿಗೆ ಸೈಟ್ ಕೊಡಿಸಿದ್ದೇನೆ ಎಂದು ನಂಬಿಸಿದ್ದಾನೆ. ಈಗ ಕನ್ನಡದಲ್ಲಿ ಕಲಿಯುಗದ ಕಂಸ ಹಾಗೂ ರಾಜನಿಗೂ-ರಾಣಿಗೂ ಎಂಬ ಚಿತ್ರಗಳ ನಿರ್ದೇಶಕನೂ ಹೌದು. ಈ ಎರಡೂ ಚಿತ್ರಗಳು ರಿಲೀಸ್ ಆಗಿಲ್ಲ.
ಈತನ ಮಾತು ನಂಬಿ ನಟ ಶರತ್ ಲೋಹಿತಾಶ್ವ ಹಲವು ಕಂತುಗಳಲ್ಲಿ ಈತನಿಗೆ ನೀಡಿರುವ ಹಣ 60 ಲಕ್ಷ. ಬೆಂಗಳೂರಿನಲ್ಲಿ 50/80 ನಿವೇಶನ ಕೊಡಿಸುತ್ತೇನೆ ಎಂದು ನಂಬಿಸಿದ್ದ. ಪತ್ನಿ ಹೆಸರಿನಲ್ಲೊಂದು ನಿವೇಶನ ಖರೀದಿಸಬೇಕು ಎಂದು ಆಸೆಯಿಟ್ಟುಕೊಂಡು ದುಡಿದಿದ್ದ ಹಣವನ್ನೆಲ್ಲ ಅವನಿಗೆ ಕೊಟ್ಟಿದ್ದ ಶರತ್ ಲೋಹಿತಾಶ್ವ, ಈಗ ಮೋಸ ಹೋಗಿದ್ದಾರೆ. ಆರೋಪಿಯನ್ನು ಮಹಾಲಕ್ಷ್ಮಿ ಲೇಔಟ್ ಪೊಲೀಸರು ಬಂಧಿಸಿದ್ದಾರೆ.