ಸೇನೆಯಲ್ಲಿ ಕೆಲಸ ಮಾಡಿ ನಿವೃತ್ತರಾದ ನಂತರ ಸಿನಿಮಾ ರಂಗಕ್ಕೆ ಬಂದ ದತ್ತಾತ್ರೇಯ ನಟಿಸಿದ ಚಿತ್ರಗಳು ಹಲವು. ವಿಂಗ್ ಕಮಾಂಡರ್ ಆಗಿದ್ದ ದತ್ತಣ್ಣ ಉದ್ಭವ ಚಿತ್ರದ ಮೂಲಕ ಬೆಳ್ಳಿತೆರೆಗೆ ಕಾಲಿಟ್ಟವರು. ಹರಿಹರ ಗುಂಡೂರಾವ್ ದತ್ತಾತ್ರೇಯ ಪೂರ್ತಿ ಹೆಸರು. 200ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿರೋ ದತ್ತಣ್ಣ ಹಲವು ರಾಜ್ಯ ಹಾಗೂ ರಾಷ್ಟ್ರಪ್ರಶಸ್ತಿಗಳನ್ನು ಪಡೆದಿದ್ದಾರೆ. ಮೈಸೂರು ಮಲ್ಲಿಗೆ, ಸಂತ ಶಿಶುನಾಳ ಷರೀಫ, ಚಿನ್ನಾರಿ ಮುತ್ತ, ಅಮೆರಿಕ ಅಮೆರಿಕ, ಉಲ್ಟಾ ಪಲ್ಟಾ, ಅತಿಥಿ, ಮುನ್ನುಡಿ, ಮೌನಿ, ಭಾರತ್ ಸ್ಟೋರ್ಸ್, ಬೆಟ್ಟದ ಜೀವ, ನೀರ್ ದೋಸೆ, ಆಕ್ಟ್ 1978.. ಹೀಗೆ ಜನ ಮೆಚ್ಚುಗೆ ಪಡೆದ ಚಿತ್ರಗಳೂ ಅರ್ಧಶತಕ ದಾಟುತ್ತವೆ. ಹಿಂದಿಯಲ್ಲಿ ಮಿಷನ್ ಮಂಗಳ್ ದತ್ತಣ್ಣ ಅವರಿಗೆ ಹೆಸರು ತಂದು ಕೊಟ್ಟ ಸಿನಿಮಾ. ಸಿನಿಮಾ ರಂಗದಲ್ಲಿಯೇ 4 ದಶಕ ಕಳೆದಿರುವ ನಟ ದತ್ತಾತ್ರೇಯ.
ಇಂಗ್ಲಿಷ್ ಲೆಕ್ಚರರ್ ಆಗಿದ್ದ ಅವಿನಾಶ್ ರಂಗಭೂಮಿಯಿಂದ ಬಂದ ಕಲಾವಿದ. ಕಾಲೇಜಿನಲ್ಲಿ ವಿದ್ಯಾರ್ಥಿಗಳ ಪ್ರೀತಿಯ ಲೆಕ್ಚರರ್ ಆಗಿದ್ದ ಅವಿನಾಶ್ ಅವರಿಗೆ ನಟನೆ ಒಂದು ಪ್ಯಾಷನ್. ಬಿ.ಜಯಶ್ರೀ ಅವರ ಸ್ಪಂದನ, ಶಂಕರ್‍ನಾಗ್ ಅವರ ಸಂಕೇತ್‍ನಲ್ಲಿದ್ದ ಅವಿನಾಶ್ ಜಿ.ವಿ.ಅಯ್ಯರ್ ಅವರ ಮಧ್ವಾಚಾರ್ಯ ಸಿನಿಮಾದಿಂದ ಚಿತ್ರರಂಗಕ್ಕೆ ಕಾಲಿಟ್ಟವರು. ಶಿವಣ್ಣ ನಟನೆಯ ಸಂಯುಕ್ತ ಮೊದಲ ಕಮರ್ಷಿಯಲ್ ಸಿನಿಮಾ. 400ಕ್ಕೂ ಹೆಚ್‍ಚು ಚಿತ್ರಗಳಲ್ಲಿ ನಟಿಸಿರುವ ಅವಿನಾಶ್ ಏಕಕಾಲಕ್ಕೆ ಕಮಷಿರ್ಯಲ್ ನಿರ್ದೇಶಕರಿಗೂ ಇಷ್ಟ. ಆರ್ಟ್ ಸಿನಿಮಾ ನಿರ್ದೇಶಕರಿಗೂ ಇಷ್ಟ. ಮತದಾನ ಚಿತ್ರಕ್ಕೆ ರಾಜ್ಯ ಪ್ರಶಸ್ತಿ ಪಡೆದಿರೋ ಅವಿನಾಶ್ ಅವರ ಆಪ್ತಮಿತ್ರ ಚಿತ್ರದ ಪಾತ್ರ ಸೂಪರ್ ಹಿಟ್. ಇಲ್ಲೊಂದು ಸಮಸ್ಯೆಯಿದೆ.. ಎನ್ನುವ ಡೈಲಾಗ್‍ನ್ನು ಕನ್ನಡಿಗರು ಮರೆಯುವಂತಿಲ್ಲ. ವಿಲನ್, ಕಾಮಿಡಿ, ಪೋಷಕ ಪಾತ್ರ.. ಹೀಗೆ ಯಾವುದೇ ಇರಲಿ ಜೀವ ತುಂಬುವ ಅವಿನಾಶ್ ತಮಿಳು, ತೆಲುಗುನಲ್ಲಿ ಕೂಡ ನಟಿಸಿದ್ದಾರೆ.
ಚಂದ್ರಶೇಖರ್ ಎಂದರೆ ಅವರಿಗೂ ಮರೆತುಹೋಗಿರಬೇಕು. ಸಿಹಿ ಕಹಿ ಅನ್ನೋ ಧಾರಾವಾಹಿಯಿಂದ ಅವರು ಮತ್ತು ಅವರ ಪತ್ನಿ ಗೀತಾಗೆ ಅಂಟಿಕೊಂಡ ಹೆಸರು ಶಾಶ್ವತವಾಗಿ ಉಳಿದುಬಿಟ್ಟಿದೆ. ಸಿನಿಮಾ, ಕಿರುತೆರೆ ಶೋಗಳಿಂದ ಹೆಚ್ಚು ಜನಪ್ರಿಯರಾದ ಸಿಹಿ ಕಹಿ ಚಂದ್ರು ಈಗ ಬೊಂಬಾಟ್ ಭೋಜನ ಶೋ ನಡೆಸಿಕೊಡುತ್ತಿದ್ದಾರೆ. ಗಣೇಶನ ಮದುವೆ, ಗೌರಿ ಗಣೇಶ, ಸ್ಪರ್ಶ, ಮತದಾನ, ಓಲ್ಡ್ ಮಾಂಕ್.. ಹೀಗೆ ನೂರಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದಾರೆ.
ಈ ಮೂವರಿಗೂ ಈ ಬಾರಿ ರಾಜ್ಯೋತ್ಸವ ಪ್ರಶಸ್ತಿ ಸಂದಿದೆ. ಶುಭಾಶಯಗಳು.