ಪೊಗರು ಚಿತ್ರದ ಒಂದು ದೃಶ್ಯ ಈಗ ವಿವಾದವನ್ನೇ ಸೃಷ್ಟಿಸಿದೆ. ಹೋಮ ಮಾಡುವ ಬ್ರಾಹ್ಮಣ ಅರ್ಚಕರ ಮೇಲೆ ವಿಲನ್ ಪಾತ್ರಧಾರಿ ಶೂಗಾಲಿಡುವುದು, ಕೆಟ್ಟದಾಗಿ ಮಾತನಾಡುವುದು ವಿವಾದದ ಕಿಡಿ ಹೊತ್ತಿಸಿದೆ.
ಚಿತ್ರದ ಅದೊಂದು ದೃಶ್ಯದಿಂದ ನೋವಾಗಿದ್ದರೆ ದಯವಿಟ್ಟು ಕ್ಷಮಿಸಿ. ಇದು ಉದ್ದೇಶಪೂರ್ವಕವಾಗಿ ಆಗಿದ್ದಲ್ಲ. ತಿಳಿದೋ.. ತಿಳಿಯದೆಯೋ.. ನಮ್ಮಿಂದ ನೋವಾಗಿದ್ದರೆ ಕ್ಷಮಿಸಿಬಿಡಿ. ಕೋವಿಡ್ ಆದ ಮೇಲೆ ತುಂಬಾ ಕಷ್ಟಪಟ್ಟು ಸಿನಿಮಾ ಬಿಡುಗಡೆ ಮಾಡಿದ್ದೇವೆ. ದಯವಿಟ್ಟು ದೊಡ್ಡ ಮನಸ್ಸು ಮಾಡಿ ಎಂದು ಕೈಮುಗಿದು ಕೇಳಿಕೊಂಡಿದ್ದಾರೆ ನಿರ್ದೇಶಕ ನಂದಕಿಶೋರ್.
ನಂದಕಿಶೋರ್ ಅವರಿಗೆ ಈ ಕೂಡಲೇ ವಿವಾದಾತ್ಮಕ ದೃಶ್ಯವನ್ನು ಒತ್ತಾಯಿಸಿದ್ದ ಕರ್ನಾಟಕ ರಾಜ್ಯ ಬ್ರಾಹ್ಮಣ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಹೆಚ್.ಎಸ್.ಸಚ್ಚಿದಾನಂದ ಮೂರ್ತಿ ಇಂದು ತಮ್ಮ ನಿರ್ಧಾರವನ್ನು ಹೇಳಲಿದ್ದಾರೆ.
ಈ ಮಧ್ಯೆ ನಂದಕಿಶೋರ್, ಸಚ್ಚಿದಾನಂದ ಮೂರ್ತಿ ಹಾಗೂ ಡಾ.ಭಾನುಪ್ರಕಾಶ್ ಅವರನ್ನೂ ಕೂಡಾ ಭೇಟಿ ಮಾಡಿ, ಅವರ ಎದುರಿನಲ್ಲೇ ಕ್ಷಮೆಯಾಚಿಸಿರುವುದರಿಂದ ವಿವಾದ ಇಲ್ಲಿಗೇ ಮುಗಿಯಬಹುದು ಎನ್ನುವ ನಿರೀಕ್ಷೆ ಇದೆ.
ಒಂದಂತೂ ಸತ್ಯ. ಚಿತ್ರರಂಗಕ್ಕೆ ಯಾವುದೇ ಧರ್ಮದ ಬಗ್ಗೆ ದ್ವೇಷವಂತೂ ಇಲ್ಲ. ಹಾಗೆ ನೋಡಿದರೆ ಕಲೆಗೆ ಜಾತಿ, ಧರ್ಮವೇ ಇಲ್ಲ. ಹೀಗಿದ್ದೂ ಅಪಚಾರವಾಗಿದ್ದರೆ ಕ್ಷಮಿಸಿ ಎಂದು ಚಿತ್ರತಂಡವೇ ಕೇಳಿಕೊಳ್ಳುತ್ತಿರುವಾಗ ಸಂಘಟನೆಗಳು ಕ್ಷಮಿಸುವ ಔದಾರ್ಯ ತೋರುತ್ತವಾ..? ಕಾದು ನೋಡಬೇಕು.